HomeEntertainmentಬಾಲಿವುಡ್ ನಟಿ ಸುಷ್ಮಿತಾ ಸೇನ್ ಬದುಕಿನ ರೋಚಕ ಹಾದಿ: ಮಗಳನ್ನು ದತ್ತು ಪಡೆದಾಗ ಮ್ಯಾನೇಜರ್ ಓಡಿಹೋಗಿದ್ದೇಕೆ?

ಬಾಲಿವುಡ್ ನಟಿ ಸುಷ್ಮಿತಾ ಸೇನ್ ಬದುಕಿನ ರೋಚಕ ಹಾದಿ: ಮಗಳನ್ನು ದತ್ತು ಪಡೆದಾಗ ಮ್ಯಾನೇಜರ್ ಓಡಿಹೋಗಿದ್ದೇಕೆ?

ಬಾಲಿವುಡ್ ಚಿತ್ರರಂಗದಲ್ಲಿ ಗಾಡ್‌ಫಾದರ್ ನೆರಳು ಇಲ್ಲದೆಯೇ ತಮ್ಮದೇ ಆದ ಸ್ವಂತ ಶೈಲಿಯಲ್ಲಿ ಗುರುತಿಸಿಕೊಂಡ ನಟಿಯರಲ್ಲಿ ಸುಷ್ಮಿತಾ ಸೇನ್ ಪ್ರಮುಖರು. 1994 ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಇವರು, ಸದಾ ತಮ್ಮ ಧೈರ್ಯಶಾಲಿ ನಿರ್ಧಾರಗಳಿಂದಲೇ ಸೌಂಡ್ ಮಾಡುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸುಷ್ಮಿತಾ ಸೇನ್ ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾ ವೃತ್ತಿಜೀವನದ ಆರಂಭಿಕ ದಿನಗಳ ಕಠಿಣ ಸವಾಲುಗಳ ಬಗ್ಗೆ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಟಿ ಸುಷ್ಮಿತಾ ಸೇನ್ ಅವರಿಗೆ ಕೇವಲ 24 ವರ್ಷ ವಯಸ್ಸಾಗಿದ್ದಾಗ, ಅಂದರೆ 2000 ನೇ ಇಸವಿಯಲ್ಲಿ ತಮ್ಮ ಮೊದಲ ಹೆಣ್ಣು ಮಗು ರೇಣಿಯನ್ನು ದತ್ತು ಪಡೆದರು. ಈ ಒಂದು ನಿರ್ಧಾರ ಇಡೀ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಕಿರಿಯ ವಯಸ್ಸಿನಲ್ಲೇ ಒಂಟಿ ತಾಯಿಯಾಗಲು ನಿರ್ಧರಿಸಿದ ಇವರ ನಿರ್ಧಾರಕ್ಕೆ ಚಿತ್ರರಂಗದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ಕುರಿತು ಮಾತನಾಡಿರುವ ನಟಿ ಸುಷ್ಮಿತಾ ಸೇನ್, ನಾನು ಮಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ ತಕ್ಷಣ ನನ್ನ ಮ್ಯಾನೇಜರ್ ನನ್ನನ್ನು ಬಿಟ್ಟು ಓಡಿಹೋದರು. ನಿನಗೆ ನಿನ್ನ ವೃತ್ತಿಜೀವನದ ಬಗ್ಗೆ ಗಂಭೀರತೆ ಇಲ್ಲ. 24ನೇ ವಯಸ್ಸಿಗೆ ತಾಯಿಯಾದ ನಟಿಯನ್ನು ನಾನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅಷ್ಟೇ ಅಲ್ಲದೆ, ಚಿತ್ರರಂಗದಲ್ಲಿ ನಿನಗೆ ಇನ್ಮುಂದೆ ಪೋಷಕ ಪಾತ್ರಗಳು ಕೂಡ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಅವರು ಹೋದಾಗ ಕೆಟ್ಟ ಕಸದಿಂದ ಮುಕ್ತಿ ಸಿಕ್ಕಿತು ಎಂದು ನಾನು ಸುಮ್ಮನಾದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರರಂಗದಲ್ಲಿ ಮಹಿಳೆಯರಿಂದಲೇ ತಮಗೆ ಹೆಚ್ಚಿನ ವಿರೋಧ ವ್ಯಕ್ತವಾಗಿತ್ತು ಎಂದು ಸುಷ್ಮಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಯಾರಿಗೂ ತಲೆ ಬಾಗದ ಅವರು, ಚಿತ್ರರಂಗದ ಹಳೆಯ ನಿಯಮಗಳನ್ನು ಮುರಿದು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡರು. ತಮಗೆ ಯಾವುದೇ ಗಾಡ್‌ಫಾದರ್ ಇರಲಿಲ್ಲ, ಯಾರೂ ತಮಗೆ ವೇದಿಕೆ ಸೃಷ್ಟಿಸಿಕೊಡಲಿಲ್ಲ, ಎಲ್ಲವನ್ನೂ ಸ್ವಂತ ಪರಿಶ್ರಮದಿಂದಲೇ ಸಾಧಿಸಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ವಿಶೇಷವೆಂದರೆ, ತಾಯಿಯಾದ ನಂತರ ಸುಷ್ಮಿತಾ ಸೇನ್ ಅವರ ವೃತ್ತಿಜೀವನ ಮುಗಿಯಿತು ಅಂದುಕೊಂಡವರಿಗೆ ಅವರು ತಮ್ಮ ಸಿನಿಮಾಗಳ ಮೂಲಕವೇ ತಕ್ಕ ಉತ್ತರ ನೀಡಿದರು. ಮಗಳನ್ನು ದತ್ತು ಪಡೆದ ನಂತರವೇ ಅವರು ಬಾಲಿವುಡ್‌ಗೆ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದರು. ಶಾರುಖ್ ಖಾನ್ ಜೊತೆಗಿನ ಮೇನ್ ಹೂ ನಾ ಮತ್ತು ಸಲ್ಮಾನ್ ಖಾನ್ ಜೊತೆ ನಟಿಸಿದ ಮೈನೆ ಪ್ಯಾರ್ ಕ್ಯು ಕಿಯಾ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದವು.

ನಂತರದ ದಿನಗಳಲ್ಲಿ ಅಂದರೆ 2010 ರಲ್ಲಿ ಅವರು ಅಲೀಶಾ ಎಂಬ ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆದರು. ಸುದೀರ್ಘ ಬಿಡುವಿನ ನಂತರ ಆರ್ಯ ವೆಬ್ ಸರಣಿಯ ಮೂಲಕ ಒಟಿಟಿ ಜಗತ್ತಿಗೆ ಪಾದಾರ್ಪಣೆ ಮಾಡಿದ ಸುಷ್ಮಿತಾ, ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದರು. ಆನಂತರ ತಾಲಿ ವೆಬ್ ಸರಣಿಯಲ್ಲಿ ತೃತೀಯಲಿಂಗಿ ಹೋರಾಟಗಾರ್ತಿ ಗೌರಿ ಸಾವಂತ್ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಯಾರ ಹಂಗೂ ಇಲ್ಲದೆ ಸ್ವಾವಲಂಬಿ ತಾಯಿಯಾಗಿ ಮತ್ತು ಯಶಸ್ವಿ ನಟಿಯಾಗಿ ಬಾಳುತ್ತಿರುವುದಾಗಿ ಸುಷ್ಮಿತಾ ಸೇನ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular