ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪದ ರಾಜಕೀಯ ಬೆಳವಣಿಗೆಗಳು ಮತ್ತು ಹೈಡ್ರಾಮಾಗಳು ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಮಧ್ಯರಾತ್ರಿ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿರುವುದು ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಹಾಗೂ ತೀವ್ರ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಸಜ್ಜಾಗಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು (ಗುರುವಾರ) ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದರು. ಈ ಮಹತ್ವದ ಭೇಟಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಗವರ್ನರ್ ದಿಢೀರ್ ವಿಮಾನ ಹತ್ತಿರುವುದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಮಧ್ಯರಾತ್ರಿ 11:45ಕ್ಕೆ ಫ್ಲೈಟ್ ಹತ್ತಿದ ಗವರ್ನರ್ ಕಾರಣವೇನು?
ಪ್ರಾಥಮಿಕ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜ್ಯಪಾಲರ ಹತ್ತಿರದ ಸಂಬಂಧಿಕರೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತುರ್ತಾಗಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಬುಧವಾರ ತಡರಾತ್ರಿ ಸುಮಾರು 11:45 ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಅವರು ಮುಂಬೈಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಮತ್ತು ಭೇಟಿಯ ಸಮಯ ಫಿಕ್ಸ್ ಆಗಿತ್ತು.ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಸಿದ್ದರಾಮಯ್ಯ ಅವರ ಭೇಟಿಗೆ ರಾಜಭವನ (ಲೋಕಭವನ) ಈಗಾಗಲೇ ಸಮಯ ನಿಗದಿಪಡಿಸಿತ್ತು.
ಮೊದಲ ಸಮಯ: ಗುರುವಾರ ಬೆಳಗ್ಗೆ 11:30 ಕ್ಕೆ ಭೇಟಿಗೆ ಅವಕಾಶ ನೀಡಲಾಗಿತ್ತು.ಎರಡನೇ ಸಮಯ ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಸಮಯಾವಕಾಶ ಕಲ್ಪಿಸಲಾಗಿತ್ತು.ಆದರೆ, ರಾಜೀನಾಮೆ ನೀಡುವ ಪ್ರಕ್ರಿಯೆಗೆ ಕೆಲವೇ ಗಂಟೆಗಳು ಇರುವಾಗ ರಾಜ್ಯಪಾಲರು ಮಧ್ಯರಾತ್ರಿಯೇ ರಾಜಧಾನಿ ತೊರೆದಿರುವುದು ಈಗ ತೀವ್ರ ಸಸ್ಪೆನ್ಸ್ ಸೃಷ್ಟಿಸಿದೆ.
ಇಂದು ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದೇ ಮುಂಬೈನಿಂದ ಬೆಂಗಳೂರಿಗೆ ಮರಳಿ ಬರುತ್ತಾರಾ ಇಲ್ಲವಾ ಎನ್ನುವುದರ ಬಗ್ಗೆ ಇನ್ನು ಯಾವುದೇ ಅಧಿಕೃತ ಖಚಿತತೆ ಸಿಕ್ಕಿಲ್ಲ. ಒಂದು ವೇಳೆ ರಾಜ್ಯಪಾಲರು ಇವತ್ತು ಮಧ್ಯಾಹ್ನದೊಳಗೆ ಮರಳಿ ಬಂದರೆ, ನಿಗದಿಪಡಿಸಿದಂತೆ ಮಧ್ಯಾಹ್ನ 3 ಗಂಟೆಯ ನಂತರ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಈ ದಿಢೀರ್ ಮುಂಬೈ ಪ್ರವಾಸದ ಹಿಂದೆ ಕೇವಲ ಕೌಟುಂಬಿಕ ಕಾರಣವಿದೆಯಾ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ರಾಜಕೀಯ ಲೆಕ್ಕಾಚಾರ ಅಡಗಿದೆಯಾ ಎಂಬ ಚರ್ಚೆಗಳು ಈಗ ಜೋರಾಗಿವೆ.

