ಇಂದು ( ಮೇ 27 ) ನ್ಯೂ ಚಂಡೀಗಢ್‌ನ ಮುಲ್ಲಾನ್‌ಪುರ್‌ನ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆರಿಸಿಕೊಂಡಿದ್ದು, ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ ಅಬ್ಬರದ ಆರಂಭ ಮಾಡಿದೆ ಕೇವಲ 4 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 63 ರನ್ ಬಾರಿಸಿತು.
ರಾಜಸ್ಥಾನ್ ರಾಯಲ್ಸ್ ಈ ಪರಿ ಆರಂಭ ಮಾಡಲು ಕಾರಣ ವೈಭವ್ ಸೂರ್ಯವಂಶಿ. ಕೇವಲ 16 ಎಸೆತಗಳಲ್ಲಿ 54 ರನ್ ಬಾರಿಸಿ ಅರ್ಧಶತಕ ಪೂರೈಸಿದ ವೈಭವ್ ಸೂರ್ಯವಂಶಿ 1 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಚಚ್ಚಿದರು.
ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ದಾಖಲೆಯನ್ನು ಮಾಡಿದ್ದ ಕ್ರಿಸ್ ಗೇಲ್‌ರನ್ನು ಹಿಂದಿಕ್ಕಿ ಆ ದಾಖಲೆಯನ್ನು ವೈಭವ್ ಸೂರ್ಯವಂಶಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
2012ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 59 ಸಿಕ್ಸರ್‌ಗಳನ್ನು ಬಾರಿಸಿದ್ದ ಕ್ರಿಸ್ ಗೇಲ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ದಾಖಕಲೆ ಬರೆದಿದ್ದರು. ಈ ದಾಖಲೆಯನ್ನು ಯಾರಿಗೂ ಸಹ ಮುರಿಯಲಾಗಿರಲಿಲ್ಲ.
ಇಂದಿನ ಪಂದ್ಯ ಆರಂಭಕ್ಕೂ ಮುನ್ನ 53 ಸಿಕ್ಸರ್ ಬಾರಿಸಿದ್ದ ವೈಭವ್ ಸೂರ್ಯವಂಶಿ ಅರ್ಧಶತಕ ಪೂರೈಸುವ ಹೊತ್ತಿಗೆ 8 ಸಿಕ್ಸರ್ ಬಾರಿಸಿದ್ದು, ಈ ಬಾರಿಯ ಟೂರ್ನಿಯಲ್ಲಿ ತಮ್ಮ ಸಿಕ್ಸರ್‌ಗಳ ಸಂಖ್ಯೆಯನ್ನು 60ಕ್ಕೆ ಏರಿಸಿಕೊಂಡಿದ್ದಾರೆ. ಈ ಮೂಲಕ ಗೇಲ್ ಬೃಹತ್ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಇನ್ನು ಈ ದಾಖಲೆ ಸಮೀಪಕ್ಕೆ ಬರುತ್ತಿದ್ದಂತೆ ಇದರ ಬಗ್ಗೆ ಮಾತನಾಡಿದ್ದ ವೈಭವ್ ದಾಖಲೆ ಮುರಿಯುವುದಾಗಿ ಹೇಳಿಕೊಂಡಿದ್ದರು. ಅದರಂತೆ ದಾಖಲೆಯನ್ನು ಮುರಿದುಹಾಕಿದ್ದಾರೆ.

