ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಾಳಗಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಮುಹೂರ್ತ ಫಿಕ್ಸ್ ಆಗಿದೆ. ಎಲ್ಲಾ ಗೊಂದಲಗಳು, ಅನವಶ್ಯಕ ಹೇಳಿಕೆಗಳು ಕೊನೆಗೊಳ್ಳಲಿವೆ. ಮುಹೂರ್ತ ಅಷ್ಟೇ ಫಿಕ್ಸ್ ಆಗಿದೆ. ಆದರೆ ಅವರ ಅಜೆಂಡಾ ಏನು ಎಂಬುದು ನಮಗೆ ಗೊತ್ತಿಲ್ಲ. ಅಲ್ಲಿ ಏನು ಚರ್ಚೆ ಆಗುತ್ತದೆ ಎಂಬುದನ್ನು ಕಾದುಡಬೇಕು ಎಂದು ಹೇಳಿದರು.
ನಾವು ಗೊಂದಲಗಳಿಗೆ ತೆರೆ ಎಳೆಯುವಂತೆ ಹೇಳುತ್ತಿದ್ದೆವು. ಹಾಗಾಗಿ ನಾಳೆ ಬೆಳಿಗ್ಗೆ ಹೈಕಮಾಂಡ್ ನಾಯಕರು ಚರ್ಚೆ ಮಾಡಲಿದ್ದಾರೆ. ಏನು ಎಂಬುದು ನಾಳೆ ಕ್ಲೀಯರ್ ಆಗಲಿದೆ. ಎಲ್ಲಾ ಗೊಂದಲಗಳು, ನಾಯಕರ ಅನಾವಶ್ಯಕ ಹೇಳಿಕೆಗಳು ಎಲ್ಲದಕ್ಕೂ ಬ್ರೇಕ್ ಹಾಕಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಮ್ಮೆಲ್ಲರ ಆಶಯ ಎಂದರು.
ನಾಯಕತ್ವ ಬದಲಾವಣೆ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನಾಳೆ ಅಲ್ಲಿ ನಡೆಯುವ ಚರ್ಚೆಗಳ ಮೇಲೆ ಮುಂದೆ ಏನಾಗಲಿದೆ ಎಂಬುದು ಗೊತ್ತಾಗುತ್ತದೆ. ಇನ್ನು ಡಿಸಿಎಂ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ನಮಗೇನೂ ಗೊತ್ತಿಲ್ಲ. ನಮ್ಮ ಸಾಮರ್ಥ್ಯವನ್ನು ಎರಡು ಮೂರು ಚುನಾವಣೆಯಲ್ಲಿ ತೋರಿಸಿದ್ದೇವೆ. ನಾವಾಗಿಯೇ ಏನನ್ನೂ ಕೇಳುವುದಿಲ್ಲ. ಅವರಾಗಿಯೇ ತೀರ್ಮಾನ ಮಾಡಬೇಕು ಎಂದರು. ಇನ್ನು ನಾಳೆ ಎಲ್ಲಾ ಗೊಂದಲಗಳು ಎಂಡ್ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

