ಫ್ರಾನ್ಸ್: ಜಾಗತಿಕ ಮಟ್ಟದ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯಾ ಬಚ್ಚನ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಸುಂದರ ಕ್ಷಣಗಳ ನಡುವೆ, ಐಶ್ವರ್ಯಾ ರೈ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿರುವಾಗ ಮಗಳು ಆರಾಧ್ಯಾ ತೋರಿದ ಪ್ರತಿಕ್ರಿಯೆಯ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ಮತ್ತು ಆರಾಧ್ಯಾ ಕೈಕೈ ಹಿಡಿದು ಸಾಗುತ್ತಿದ್ದಾಗ, ಅಲ್ಲಿದ್ದ ಅಭಿಮಾನಿಯೊಬ್ಬರು ಆಟೋಗ್ರಾಫ್ ಮತ್ತು ಸೆಲ್ಫಿಗಾಗಿ ವಿನಂತಿಸಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಐಶ್ವರ್ಯಾ ರೈ, ಮುಗುಳ್ನಗೆಯಿಂದಲೇ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಆರಾಧ್ಯಾ ಬಚ್ಚನ್, ತಮ್ಮ ತಾಯಿಗೆ ಜಗತ್ತಿನಾದ್ಯಂತ ಸಿಗುತ್ತಿರುವ ಪ್ರೀತಿ ಮತ್ತು ಗೌರವವನ್ನು ಕಂಡು ಹೆಮ್ಮೆಯಿಂದ ಮುಖತುಂಬಾ ನಗುತ್ತಾ ನೋಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನೆಟ್ಟಿಗರ ಮನಗೆದ್ದ ತಾಯಿ-ಮಗಳ ಕೆಮಿಸ್ಟ್ರಿ: ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆರಾಧ್ಯಾ ಅವರ ಮುಗ್ಧ ಮತ್ತು ಹೆಮ್ಮೆಯ ಮುಖಭಾವಕ್ಕೆ ಫಿದಾ ಆಗಿದ್ದಾರೆ. “ಮಗಳು ತನ್ನ ತಾಯಿಯ ಸಾಧನೆಯನ್ನು ನೋಡಿ ಎಷ್ಟು ಹೆಮ್ಮೆ ಪಡುತ್ತಿದ್ದಾಳೆ!”, “ಅಮ್ಮನ ತರಹವೇ ಮಗಳು ಕೂಡ ಅಷ್ಟೇ ವಿನಮ್ರ ಸ್ವಭಾವದವಳು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ರೈ ತಿಳಿ ಗುಲಾಬಿ ಬಣ್ಣದ ಗೌನ್ನಲ್ಲಿ ಮಿಂಚಿದರೆ, ಆರಾಧ್ಯಾ ಕೆಂಪು ಬಣ್ಣದ ಗೌನ್ ಧರಿಸಿ ಕಂಗೊಳಿಸಿದ್ದರು. ಈ ಹಿಂದೆ ಹಲವು ಬಾರಿ ಐಶ್ವರ್ಯಾ ಜೊತೆ ಕಾನ್ಗೆ ಆರಾಧ್ಯಾ ಬಂದಿದ್ದರೂ, ಅಧಿಕೃತವಾಗಿ ರೆಡ್ ಕಾರ್ಪೆಟ್ ಮೇಲೆ ಅಮ್ಮನ ಜೊತೆ ಹೆಜ್ಜೆ ಹಾಕಿದ್ದು ಇದೇ ಮೊದಲು.
ಇದೇ ಸಂದರ್ಭದಲ್ಲಿ ನವೋದಿತ ನಟ-ನಟಿಯರಿಗೆ ಕಿವಿಮಾತು ಹೇಳಿದ ಐಶ್ವರ್ಯಾ ರೈ, “ನಿಮ್ಮ ಆಸಕ್ತಿ ಏನೆಂಬುದನ್ನು ನೀವೇ ಕಂಡುಕೊಳ್ಳಿ ಮತ್ತು ನಿಮ್ಮ ಆಯ್ಕೆಗಳಿಗೆ ಪ್ರಾಮಾಣಿಕವಾಗಿರಿ. ಇಂದಿನ ಕೃತಕ ಜಗತ್ತಿನಲ್ಲಿ ಯಾವುದನ್ನೂ ಬಲವಂತವಾಗಿ ಸೃಷ್ಟಿಸಲು ಹೋಗಬೇಡಿ, ಅದರಲ್ಲಿ ಯಾವುದೇ ಮ್ಯಾಜಿಕ್ ಇರುವುದಿಲ್ಲ. ಜೀವನವನ್ನು ಅನುಭವಿಸಿ, ಆ ಅನುಭವವನ್ನು ನಿಮ್ಮ ಕಲೆಗೆ ತನ್ನಿ” ಎಂದು ಸಲಹೆ ನೀಡಿದ್ದಾರೆ.

