ಭಟ್ಕಳ: ಕಪ್ಪೆ ಚಿಪ್ಪು ಆರಿಸಲು ಹೋಗಿ 10 ಜನರು ಜಲಸಮಾಧಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಇಂದು ನದಿಯಲ್ಲಿ ಶೋಧಕಾರ್ಯ ಮುಂದುವರೆಸಲಾಗಿದ್ದು, ಈ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕಪ್ಪೆಚಿಪ್ಪು ಆರಿಸಲು ಹೋಗಿದ್ದಾಗ ನದಿಯಲ್ಲಿ ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಪತ್ತೆಯಾಗಿದೆ. ಇವರೊಂದಿಗೆ ಇನ್ನೊಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಎನ್ಡಿಆರ್ಎಫ್, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ಕಪ್ಪೆ ಚುಪ್ಪು ಆರಿಸಲು ಹೋಗಿ 11 ಜನರು ಜಲ ಸಮಾಧಿಯಾಗಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ನೀರುಪಾಲದವರ ಪೈಕಿ ಒಂದೊಂದು ಕುಟುಂಬಗಳ ಕಥೆ ಮನಕಲಕುವಂತಿದೆ. ದುರಂತದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಮೃತಪಟ್ಟಿದ್ದಾರೆ. ತಂದೆ ತಾಯಿ ಇಬ್ಬರೂ ನೀರುಪಾಲಾದ ಹಿನ್ನೆಲೆ ಮಕ್ಕಳಾದ ದರ್ಶನ (23), ಕಿರ್ತನಾ(20) ಈಗ ಅನಾಥರಾಗಿದ್ದಾರೆ.
ಮತ್ತೊಂದೆಡೆ ಅವಘಡದಲ್ಲಿ ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಕೂಡ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಓದುತ್ತಿದ್ದ ನಾಲ್ವರು ಮಕ್ಕಳಿಗೆ ಅಮ್ಮನೇ ಅಧಾರವಾಗಿದ್ದರು. ಆದರೀಗ ಆಕೆಯೂ ಮೃತಪಟ್ಟಿರೋದು ಮಕ್ಕಳಿಗೆ ದಿಕ್ಕು ತೋಚದಂತೆ ಮಾಡಿದೆ.
ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ಉಳಿಸಲು ಹೋಗಿ ಅವರ ಮಗ ಉಮೇಶ್ ನಾಯ್ಕ್ ಕೂಡ ನೀರುಪಾಲಾಗಿದ್ದಾರೆ. ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ ಮಗ ಉಮೆಶ್, ಬಂಡೆ ಮೇಲೆ ಕಪ್ಪೆ ಚಿಪ್ಪು ಹೆಕ್ಕುತ್ತಿದ್ದರು. ತಾಯಿ ನೀರಲ್ಲಿ ಮುಳುಗುತ್ತಿದ್ದಿದ್ದು ಕಂಡಿದ್ದೇ ತಡ ಆಕೆಯ ರಕ್ಷಣೆಗೆಂದು ಅವರು ಕೂಡ ನೀರಿಗೆ ಹಾರಿದ್ದರು. ತಾಯಿ ಎಳೆಯಲು ಪ್ರಯತ್ನಿಸಿದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನೀರಿಂದ ಆತ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗಾಗಿ ಉಮೇಶ್ ಕಾಲು ಎಳೆದಿದ್ದಾರೆ. ಹೀಗಾಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿರೋದಾಗಿ ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.

