ಬೆಳಗಾವಿ: ರಾಜ್ಯ ಸರ್ಕಾರ ಈ ಬಾರಿಯ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಇತ್ತೀಚೆಗೆ ಸುವರ್ಣಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ವರ್ಷ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತಿತ್ತು. ಪ್ರಸ್ತುತ ಚಳಿಗಾಲದ ಅಧಿವೇಶನದ ಬದಲಿಗೆ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ಸೂಚನೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ.
ಸುವರ್ಣಸೌಧದಲ್ಲಿ ಮುಂಗಾರು ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮೇ 22ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್ ಆಯುಕ್ತರು, ಎಸ್ಪಿ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಬಾರಿ ಮುಂಗಾರು ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಪರಿಶೀಲನೆ ನಡೆಸಿ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.

