ನಿನ್ನೆ ( ಮೇ 23 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಸತತ ಆರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ ಜೋಶ್ ಇಂಗ್ಲಿಸ್ ಅರ್ಧಶತಕ ಹಾಗೂ ಆಯುಷ್ ಬದೋನಿ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 197 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರಾನ್ ಅರ್ಧಶತಕ ಹಾಗೂ ಶ್ರೇಯಸ್ ಐಯ್ಯರ್ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತು.
ಹೀಗೆ ಸತತ ಆರು ಸೋಲಿನ ಬಳಿಕ ಗೆದ್ದ ಪಂಜಾಬ್ ಕಿಂಗ್ಸ್ 15 ಅಂಕಗಳನ್ನು ಹೊಂದಿದ್ದು, ಪ್ಲೇಆಫ್ ಪ್ರವೇಶಿಸುವ ಕನಸು ಕಾಣುತ್ತಿದೆ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಅವರ ಅಂಕಗಳು 16 ಆಗಲಿದ್ದು, ಅಲ್ಲಿಗೆ ರಾಜಸ್ಥಾನ್ ಪ್ಲೇಆಫ್ ತಲುಪಲಿದೆ.
ಇನ್ನು ಈ ಪಂದ್ಯದಲ್ಲಿ ಸೋತ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಆಟವನ್ನಾಡಿ ಆಗಲೇ ಟೂರ್ನಿಯಿಂದ ಹೊರಬಿದ್ದಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದರು.
ಆದರೆ ಯಾವೊಂದು ಪಂದ್ಯದಲ್ಲೂ ಸಹ ಅರ್ಜುನ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆಲ್‌ರೌಂಡರ್ ಆಗಿರುವ ಅರ್ಜುನ್ ನೆಟ್ ಪ್ರಾಕ್ಟಿಸ್‌ನಲ್ಲಿ ಡೆಡ್ಲಿ ಯಾರ್ಕರ್‌ಗಳನ್ನು ಎಸೆಯುವುದನ್ನು ಬಿಟ್ಟರೆ ಮೈದಾನಕ್ಕಿಳಿದು ಅಸಲಿ ಪಂದ್ಯವನ್ನಾಡಿದ್ದನ್ನು ನೋಡಲಾಗಿರಲಿಲ್ಲ.
ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಅರ್ಜುನ್‌ಗೆ ಆಡುವ ಅವಕಾಶ ದೊರಕಿತು. ತಾನು ಮಾಡಿದ 4 ಓವರ್‌ಗಳಲ್ಲಿ 36 ರನ್ ನೀಡಿದ ಅರ್ಜುನ್ ಪ್ರಭ್‌ಸಿಮ್ರಾನ್ ಸಿಂಗ್‌ರನ್ನು ಎಲ್‌ಬಿಡಬ್ಲ್ಯೂ ಮಾಡಿ ವಿಕೆಟ್ ಪಡೆದರು.
ಇನ್ನು ಬ್ಯಾಟಿಂಗ್ ಸಹ ಮಾಡಿದ ಅರ್ಜುನ್ ತೆಂಡೂಲ್ಕರ್ 5 ಎಸೆತಗಳಲ್ಲಿ ಅಜೇಯ 5 ರನ್ ಬಾರಿಸಿದರು. ತಾನು ಎದುರಿಸಿದ ಐದು ಎಸೆತಗಳ ಪೈಕಿ ಕೇವಲ ಒಂದು ಎಸೆತವನ್ನು ಮಾತ್ರ ಡಾಟ್ ಮಾಡಿಕೊಂಡ ಅರ್ಜುನ್‌ಗೆ ಕೊನೆಯ ಓವರ್‌ನಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ಕೊಡಲು ಮುಂದಾಗಲಿಲ್ಲ. ಕೊನೆಯ ಓವರ್‌ನ ಮೊದಲ ಮೂರು ಎಸೆತಗಳನ್ನು ಡಾಟ್ ಆಡಿದ ಅಬ್ದುಲ್ ಸಮದ್ ನಂತರ ಕೊನೆಯ ಮೂರು ಎಸೆತಗಳಿಗೆ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.
ಸದ್ಯ ಅಬ್ದುಲ್ ಸಮದ್ ಈ ನಡೆ ಟೀಕೆಗೆ ಕಾರಣವಾಗಿದ್ದು, ಓರ್ವ ಆಲ್‌ರೌಂಡರ್ ಆಟಗಾರ ಇರುವಾಗ ಈ ರೀತಿ ತನಗೆ ಎಲ್ಲ ಗೊತ್ತು ಎಂಬಂತೆ ಬ್ಯಾಟಿಂಗ್ ನೀಡದೇ ಇದ್ದದ್ದು ಅರ್ಜುನ್ ತೆಂಡೂಲ್ಕರ್‌ಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಅಪರೂಪಕ್ಕೆ ಅವಕಾಶ ಸಿಕ್ಕ ಆಟಗಾರ ಅರ್ಧ ರನ್ ಓಡಿದರೂ ವಾಪಸ್ ಕಳುಹಿಸಿ ಬ್ಯಾಟಿಂಗ್ ನೀಡದೇ ಈ ರೀತಿ ನಡೆಸಿಕೊಳ್ಳುವುದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಎಂದೂ ಸಹ ಟ್ರೋಲ್ ಮಾಡಲಾಗುತ್ತಿದೆ.
ಕೆಲವರು ತನ್ನ ತಂದೆ ಕ್ರಿಕೆಟ್ ದೇವರು ಎಂಬ ಬಿರುದು ಪಡೆದು ಹೆಸರು ಮಾಡಿದ್ದರೂ ಅದನ್ನು ದುರುಪಯೋಗ ಮಾಡಿಕೊಳ್ಳದೇ ತನ್ನದೇ ಸ್ವಂತ ಪ್ರತಿಭೆಯಿಂದ ಬೆಳೆಯಬೇಕೆನ್ನುವ ಹಂಬಲ ಇರುವ ಅರ್ಜುನ್‌ನ ಈ ಪರಿಸ್ಥಿತಿ ನೋಡಿದರೆ ಪಾಪ ಅನಿಸುತ್ತೆ ಎಂದು ಬರೆದುಕೊಂಡಿದ್ದಾರೆ.

