ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ, ಡಾ. ರಾಜ್ಕುಮಾರ್ ಸಮಾಧಿ ಬಗ್ಗೆ ನೀಡಿದ್ದ ಹೇಳಿಕೆಯಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ರಾಜ್ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಚೇತನ್ ಪ್ರಶ್ನಿಸಿದ್ದರು. ಅವರ ಹೇಳಿಕೆಯನ್ನು ರಾಜ್ಕುಮಾರ್ ಅಭಿಮಾನಿಗಳು ವಿರೋಧಿಸಿದ್ದರು. ಹಾಗಿದ್ದರೂ ಕೂಡ ಚೇತನ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿದ್ದು, ಮತ್ತೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಪಾಲಿಸಿಗೆ ಸಂಬಂಧಪಟ್ಟಂತೆ ನಾನು ಪ್ರಸ್ತಾಪ ಮಾಡಿದ್ದು. ನಾವೆಲ್ಲರೂ ಕೂಡ ರಾಜ್ಕುಮಾರ್ ಅವರ ಅಭಿಮಾನಿಗಳು. ಅವರ ಕಲಾಸೇವೆ ಅಪಾರ. ಆದರೆ ಸರ್ಕಾರ ಪಕ್ಷಪಾತ ಮಾಡಿದ ತಕ್ಷಣ ಏನು ಸಮಸ್ಯೆ ಆಗುತ್ತದೆ ಎಂಬುದನ್ನು ನಾನು ಸಣ್ಣದಾಗಿ ಮೂರು ಸಾಲಿನ ಪೋಸ್ಟ್ ಮಾಡಿದ್ದೆ. ಕೆಲವರಿಂದ ಅದು ದೊಡ್ಡದಾಗಿದೆ ಎಂದರು.
ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಕರ್ನಾಟಕದ ಜನರು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ಜಾಗೃತಿಗೆ ಕಾರಣ ಆಯಿತು ಅಂತ ಜನ ಹೇಳಿದ್ದಾರೆ. ನಮಗೆ ಸಮಾನತೆಯ, ನ್ಯಾಯದ, ವೈಜ್ಞಾನಿಕತೆಯ ಸಮಾಜಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.

