ಭಾರತೀಯರ ಜೀವನ ಶೈಲಿ ನೋಡಿ ನಾವು ತಪ್ಪಾಗಿ ಬದುಕುತ್ತಿದ್ದೇವೆ ಎಂದ ವಿದೇಶಿ ಮಹಿಳೆ!
ಭಾರತದ ಸಂಸ್ಕೃತಿ ಮತ್ತು ಇಲ್ಲಿನ ಜನರ ಜೀವನಶೈಲಿ ವಿಶ್ವದಾದ್ಯಂತ ಹಲವರನ್ನು ಆಕರ್ಷಿಸಿದೆ. ಇದಕ್ಕೆ ಪೂರಕವೆಂಬಂತೆ, ಭಾರತದಲ್ಲಿ ವಾಸಿಸುತ್ತಿರುವ ಲಿಥುವೇನಿಯಾ ಮೂಲದ ಮೋನಿಕಾ ಕುಂಜೇಶ್ವರಿ ದಾಸಿ ಎಂಬ ಮಹಿಳೆ, ಯುರೋಪಿಯನ್ನರು ಭಾರತೀಯರಿಂದ ಕಲಿಯಬೇಕಾದ ಐದು ಪ್ರಮುಖ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪಾಶ್ಚಿಮಾತ್ಯ ದೇಶಗಳು ಭಾರತೀಯ ಸಂಸ್ಕೃತಿಯಿಂದ ಕಲಿಯುವುದು ತುಂಬಾ ಇದೆ ಎಂದು ಅಭಿಪ್ರಾಯಪಟ್ಟಿರುವ ಮೋನಿಕಾ, ಅವರು ಗಮನಿಸಿದ ಆ ೫ ಪ್ರಮುಖ ಸಂಗತಿಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.
೧. ಅತಿಥಿ ದೇವೋ ಭವ ಹಾಗೂ ಆತಿಥ್ಯ ಭಾರತದಲ್ಲಿ ಅತಿಥಿಗಳನ್ನು ಉಪಚರಿಸುವ ರೀತಿ ಅದ್ಭುತವಾಗಿದೆ. ಮನೆಗೆ ಯಾರು ಬಂದರೂ ಪ್ರೀತಿಯಿಂದ ಊಟ, ಚಹಾ ನೀಡಿ ಉಪಚರಿಸುವುದು ಇಲ್ಲಿನ ಮೂಲಭೂತ ಸಂಸ್ಕಾರವಾಗಿದೆ. ಯುರೋಪ್ ದೇಶಗಳಿಗೆ ಹೋಲಿಸಿದರೆ ಭಾರತದ ಆತಿಥ್ಯದ ಶೈಲಿ ನಿಜಕ್ಕೂ ಉನ್ನತ ಮಟ್ಟದಲ್ಲಿದೆ ಎಂದು ಮೋನಿಕಾ ಶ್ಲಾಘಿಸಿದ್ದಾರೆ.
೨. ಸಮುದಾಯ ಜೀವನ ಮತ್ತು ನಂಬಿಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟಿತನ ಹೆಚ್ಚಾಗುತ್ತಿದೆ. ಆದರೆ ಭಾರತದಲ್ಲಿ ನೆರೆಹೊರೆಯವರು ಒಬ್ಬರನ್ನೊಬ್ಬರು ಬಲ್ಲರು. ಯಾರಿಗಾದರೂ ಸಹಾಯ ಬೇಕಿದ್ದಾಗ ತಕ್ಷಣ ಯಾರಾದರೂ ಒಬ್ಬರು ಮುಂದೆ ಬರುತ್ತಾರೆ. ಈ ರೀತಿಯ ಬಾಂಧವ್ಯ ಪಾಶ್ಚಿಮಾತ್ಯ ದೇಶಗಳಲ್ಲಿ ಮರೆಯಾಗುತ್ತಿದೆ.
೩. ಒಟ್ಟಿಗೆ ಕುಳಿತು ಉಣ್ಣುವ ಸಂಪ್ರದಾಯ ಭಾರತೀಯ ಮನೆಗಳಲ್ಲಿ ಇಂದಿಗೂ ಮನೆಯಲ್ಲೇ ಅಡುಗೆ ಮಾಡುವುದು ಮತ್ತು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ವಾಡಿಕೆಯಾಗಿದೆ. ಇಲ್ಲಿ ಕೇವಲ ಯಾಂತ್ರಿಕವಾಗಿ ವೇಗವಾಗಿ ಆಹಾರ ಸೇವಿಸುವುದಷ್ಟೇ ಮುಖ್ಯವಲ್ಲ, ಅದರ ಹಿಂದೆ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯವಿದೆ ಎಂಬುದನ್ನು ಅವರು ಗುರುತಿಸಿದ್ದಾರೆ.
೪. ವೈಯಕ್ತಿಕ ಸ್ವಚ್ಛತೆ ಭಾರತದ ಜನರು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪ್ರತಿದಿನ ಸ್ನಾನ ಮಾಡುವುದು, ಸ್ವಚ್ಛವಾದ ಬಟ್ಟೆ ಧರಿಸುವುದು ಮತ್ತು ತಮ್ಮನ್ನು ತಾವು ಸದಾ ಫ್ರೆಶ್ ಆಗಿ ಇಟ್ಟುಕೊಳ್ಳುವ ಅಭ್ಯಾಸ ಭಾರತೀಯರಲ್ಲಿದೆ. ಇದು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕಾದ ಅತ್ಯುತ್ತಮ ಹವ್ಯಾಸ ಎಂದು ಅವರು ಹೇಳಿದ್ದಾರೆ.
೫. ಜೀವನವನ್ನು ಆನಂದಿಸುವ ಕಲೆ ಭಾರತೀಯರು ಹಬ್ಬ ಹರಿದಿನಗಳು, ನೃತ್ಯ, ಸಂಗೀತದ ಮೂಲಕ ಒಟ್ಟಾಗಿ ಸಂಭ್ರಮಿಸುತ್ತಾರೆ. ಜೀವನವನ್ನು ಆನಂದಿಸಲು ಅವರಿಗೆ ಯಾವುದೇ ವಿಶೇಷ ಕಾರಣ ಬೇಕಾಗಿಲ್ಲ. ಆದರೆ ಯುರೋಪ್ನಲ್ಲಿ ಜನರು ಎಷ್ಟು ಗಂಭೀರವಾಗಿದ್ದಾರೆ ಎಂದರೆ, ಜೀವನವನ್ನು ಸರಳವಾಗಿ ಆನಂದಿಸುವುದನ್ನೇ ಮರೆತುಬಿಟ್ಟಿದ್ದಾರೆ ಎಂದು ಮೋನಿಕಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಒಳ್ಳೆಯ ಮತ್ತು ಕೆಟ್ಟ ದಿನಗಳಿರುತ್ತವೆ. ಆದರೆ ಭಾರತದಲ್ಲಿ ವಾಸಿಸಿದ ನಂತರ ನಾನು ಕಲಿತ ಅತ್ಯುತ್ತಮ ವಿಷಯಗಳಿವು ಎಂದು ಮೋನಿಕಾ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ನೆಟಿಜನ್ಸ್ ಸಖತ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಭಾರತೀಯ ಸಂಸ್ಕೃತಿಯ ಹೆಮ್ಮೆಯನ್ನು ಕೊಂಡಾಡುತ್ತಿದ್ದಾರೆ.

