ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸಿಸಿಹೆಚ್ ಕೋರ್ಟ್ ನಿಂದ ನಗರದ 59ನೇ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆಯಾಗಿದೆ.
ಪ್ರಕರಣದ ಕನಿಷ್ಠ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜೂನ್ 1ರಿಂದ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ.
ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ಸಲ್ಲಿಸಿದ್ದಾರೆ. ಇದರ ಅನ್ವಯ ಪ್ರಕರಣದ ತ್ವರಿತಗತಿ ವಿಚಾರಣೆ ನಡೆಸುವ ಮತ್ತು ಆರೋಪಿಗಳಿಗೆ ನೀಡಬೇಕಾದ ಕನಿಷ್ಠ ಸೌಲಭ್ಯಗಳ ಮಾರ್ಗಸೂಚಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ನ್ಯಾ. ಸುಜಾತ ಎಂ. ಸಾಮ್ರಾಣಿಯವರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಇದೇ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದು ಹೊರಗಿರುವ 5 ಆರೋಪಿಗಳ ಜಾಮೀನು ಕೂಡಲೇ ರದ್ದುಗೊಳಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರತಿ ಸಲ್ಲಿಸಲಾಗಿದೆ ಎನ್ನಲಾಗಿದೆ.

