ವಿಶ್ವದ ಅತ್ಯಂತ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ 2026 ಸಂಭ್ರಮದ ನಡುವೆಯೇ ಫ್ರಾನ್ಸ್ನ ಐಷಾರಾಮಿ ಹೋಟೆಲ್ನಲ್ಲಿ ಘೋರ ಘಟನೆಯೊಂದು ನಡೆದಿದೆ. ಖ್ಯಾತ ಮಾಡೆಲ್ ಹಾಗೂ 2025ರ ಮಿಸ್ ವೆನೆಜುವೆಲಾ ಸುಂದರಿ ಆಂಡ್ರಿಯಾ ಡೆಲ್ ವಾಲ್ ಅವರ ಮೇಲೆ ಅವರದೇ ಸ್ವಂತ ಸ್ಟೈಲಿಸ್ಟ್ ಜಿಯೋವಾನಿ ಲಾಗುನಾ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ರಕ್ತಸಿಕ್ತ ಮುಖದೊಂದಿಗೆ ಆಂಡ್ರಿಯಾ ಹಂಚಿಕೊಂಡಿರುವ ವಿಡಿಯೋ ಸದ್ಯ ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದೆ.
29 ವರ್ಷದ ಆಂಡ್ರಿಯಾ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ಫ್ರಾನ್ಸ್ನ ಕಾನ್ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಹೋಟೆಲ್ ರೂಮ್ನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಸ್ಟೈಲಿಸ್ಟ್ ಜಿಯೋವಾನಿ ಲಾಗುನಾ ಆಕೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆಂಡ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭೀಕರ ವಿಡಿಯೋದಲ್ಲಿ, ಅವರ ಮುಖ ಮತ್ತು ಕುತ್ತಿಗೆಯ ಭಾಗದಿಂದ ರಕ್ತ ಹರಿಯುತ್ತಿರುವುದು ಕಂಡುಬಂದಿದೆ. “ನೋಡಿ, ಜಿಯೋವಾನಿ ಲಾಗುನಾ ನನಗೆ ಏನು ಮಾಡಿದ್ದಾನೆ. ನಿನ್ನ ಅಸಲಿ ಮುಖ ಏನೆಂದು ಜಗತ್ತಿಗೆ ತೋರಿಸಬೇಕಿತ್ತು, ಅದನ್ನೇ ಮಾಡಿದ್ದೀಯಾ” ಎಂದು ಆಂಡ್ರಿಯಾ ನೋವಿನಿಂದ ಸ್ಪ್ಯಾನಿಷ್ ಭಾಷೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವಿಡಿಯೋದಲ್ಲಿ ಹಲ್ಲೆ ನಡೆಸಿದ ಆರೋಪಿ ರೂಮ್ನ ಸೋಫಾ ಮೇಲೆ ಸುಮ್ಮನೆ ಕುಳಿತಿರುವುದನ್ನು ಕಾಣಬಹುದು.
ಹೋಟೆಲ್ ರೂಮ್ನಿಂದ ಜೋರಾಗಿ ಕಿರುಚಾಟ, ವಸ್ತುಗಳನ್ನು ಎಸೆಯುವ ಮತ್ತು ಹೊಡೆದಾಟದ ಶಬ್ದ ಕೇಳಿಬಂದಾಗ ಪಕ್ಕದ ರೂಮ್ನಲ್ಲಿದ್ದ ಅತಿಥಿಗಳು ತಕ್ಷಣವೇ ಹೋಟೆಲ್ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಫ್ರೆಂಚ್ ಅಧಿಕಾರಿಗಳು ಹೋಟೆಲ್ಗೆ ಧಾವಿಸಿ, ಗಂಭೀರವಾಗಿ ಗಾಯಗೊಂಡಿದ್ದ ಆಂಡ್ರಿಯಾಗೆ ತುರ್ತು ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯ ಎಸಗಿದ ಸ್ಟೈಲಿಸ್ಟ್ ಜಿಯೋವಾನಿಯನ್ನು ಫ್ರೆಂಚ್ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಲ್ಯಾಟಿನ್ ಅಮೆರಿಕಾದಲ್ಲಿ ಸೆಲೆಬ್ರಿಟಿಗಳು ಹಾಗೂ ಸುಂದರಿಯರಿಗೆ ಸ್ಟೈಲಿಸ್ಟ್ ಆಗಿ ಜಿಯೋವಾನಿ ಲಾಗುನಾ ದೊಡ್ಡ ಹೆಸರು ಮಾಡಿದ್ದನು. ಇಬ್ಬರ ನಡುವೆ ಇಷ್ಟೊಂದು ದೊಡ್ಡ ಮಟ್ಟದ ಗಲಾಟೆ ನಡೆಯಲು ನಿಖರ ಕಾರಣ ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಘಟನೆ ಕಾನ್ ಚಿತ್ರೋತ್ಸವಕ್ಕೆ ಬಂದಿರುವ ಗಣ್ಯರಲ್ಲಿ ತೀವ್ರ ಆತಂಕ ಮೂಡಿಸಿದೆ.

