ನವದೆಹಲಿ : ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಡ ಮೂತ್ರಪಿಂಡದ ಬದಲು ಬಲ ಮೂತ್ರಪಿಂಡವನ್ನು ತೆಗೆದುಹಾಕಿದ ಪರಿಣಾಮ 56 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (NCDRC) ಆಕೆಯ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.ಈ ಪ್ರಕರಣವನ್ನು “ನ್ಯಾಯಾಂಗದಲ್ಲಿ ಅಪರೂಪವಾಗಿ ಕಾಣುವ ಅತ್ಯಂತ ಗಂಭೀರ ಸ್ವರೂಪದ ನಿರ್ಲಕ್ಷ್ಯ” ಎಂದು ಆಯೋಗವು ಬಣ್ಣಿಸಿದೆ.
ಪ್ರಕರಣದ ಹಿನ್ನೆಲೆ:
2012ರಲ್ಲಿ ಮಹಿಳೆಯೊಬ್ಬರು ಹೊಟ್ಟೆ ನೋವಿನ ಸಮಸ್ಯೆಯಿಂದ ಅಲಿಗಢದ ‘ಆಶೀರ್ವಾದ ನರ್ಸಿಂಗ್ ಹೋಮ್’ನ ಡಾ. ರಾಜೀವ್ ಲೋಚನ್ ಅವರನ್ನು ಸಂಪರ್ಕಿಸಿದ್ದರು.ಮಹಿಳೆಯ ಬಲ ಮೂತ್ರಪಿಂಡದಲ್ಲಿ ಸಮಸ್ಯೆ (ಹೈಡ್ರೊನೆಫ್ರೋಸಿಸ್) ಇರುವುದು ಪತ್ತೆಯಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಬಲ ಮೂತ್ರಪಿಂಡದ ಬದಲು ಆರೋಗ್ಯವಾಗಿದ್ದ ಎಡ ಮೂತ್ರಪಿಂಡವನ್ನು ತೆಗೆದುಹಾಕಿದರು.ಈ ಘಟನೆಯ ನಂತರ ಮಹಿಳೆಯ ಆರೋಗ್ಯ ಹದಗೆಟ್ಟಿತು. ಎರಡು ವರ್ಷಗಳ ಸುದೀರ್ಘ ಹೋರಾಟದ ನಂತರ, ಅವರು ಹೈಪರ್ಕಲೆಮಿಯಾ ಮತ್ತು ಹೈಪೊಗ್ಲಿಸಿಮಿಯಾದಿಂದಾಗಿ ಮೃತಪಟ್ಟರು.
ವೈದ್ಯಕೀಯ ಮಂಡಳಿಯ ವರದಿಯು ವೈದ್ಯರ ನಿರ್ಲಕ್ಷ್ಯವನ್ನು ಖಚಿತಪಡಿಸಿದೆ. ಉತ್ತರ ಪ್ರದೇಶ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ (MCI) ಕೂಡ ವೈದ್ಯರ ಪರವಾನಗಿಯನ್ನು ಅಮಾನತುಗೊಳಿಸಿತ್ತು.”56 ವರ್ಷದ ಮಹಿಳೆಯ ಸಾವು ಮತ್ತು ಅವರಿಲ್ಲದ ಜೀವನವು ಕುಟುಂಬಕ್ಕೆ ತುಂಬಲಾರದ ನಷ್ಟ. ತಾಯಿಯನ್ನು ಕಳೆದುಕೊಂಡ ಮಕ್ಕಳ ನೋವು ಮತ್ತು ಪತಿಯ ನಷ್ಟವನ್ನು ಹಣದಿಂದ ಅಳೆಯಲಾಗದು, ಆದರೆ ಈ ನಿರ್ಲಕ್ಷ್ಯಕ್ಕೆ ತಕ್ಕ ಪರಿಹಾರ ನೀಡಲೇಬೇಕಾಗಿದೆ” ಎಂದು ಆಯೋಗ ತಿಳಿಸಿದೆ.ವೈದ್ಯರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಆಯೋಗವು ಈ ವಾದವನ್ನು “ಅಪಾರವಾದ ಮತ್ತು ಒಪ್ಪಲಾಗದ ಸಮರ್ಥನೆ” ಎಂದು ಕರೆದು ತಳ್ಳಿಹಾಕಿತು.
ಪರಿಹಾರದ ವಿವರ: ಒಟ್ಟು 2 ಕೋಟಿ ರೂ. ಪರಿಹಾರದಲ್ಲಿ:
- ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ. (ಪ್ರೀತಿ ಮತ್ತು ಸಾಂಗತ್ಯ ಕಳೆದುಕೊಂಡಿದ್ದಕ್ಕಾಗಿ).
- ವೈದ್ಯರ ನಿರ್ಲಕ್ಷ್ಯಕ್ಕಾಗಿ 1.5 ಕೋಟಿ ರೂ. (ಒಟ್ಟು ಮೊತ್ತ).
- ಕಾನೂನು ವೆಚ್ಚಗಳಿಗಾಗಿ 1 ಲಕ್ಷ ರೂ. ಸೇರಿದೆ.

