ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಪ್ರಮುಖವಾಗಿ ಜೈಲುಗಳಲ್ಲಿ ಕೆಲ ಬದಲಾವಣೆಗಳನ್ನು ತರಲು ಸೂಚಿಸಿದ್ದಾರೆ. ಇದರಿಂದಾಗಿ ಕೈದಿಗಳಿಗೆ ಮತ್ತಷ್ಟು ಬಿಸಿ ಮುಟ್ಟಿಸಿದ್ದಾರೆ.
ಜೈಲುಗಳಲ್ಲಿ ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ನೆಲೆಸಿದ್ದ ಕೈದಿಗಳಿಗೆ ಅವರ ಬ್ಯಾರಕ್ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ. ಸುಮಾರು 10, 15, 20 ವರ್ಷಗಳಿಂದ ಒಂದೇ ಬ್ಯಾರಕ್ನಲ್ಲಿ ಇರುತ್ತಿದ್ದ ಕೈದಿಗಳಿಗೆ ಇನ್ನು ಮುಂದೆ ಆಲ್ಫಾಬೆಟಿಕ್ ಆಧಾರದ ಮೇಲೆ ಬ್ಯಾರಕ್ಗಳನ್ನು ಹಂಚಿಕೆ ಮಾಡಲಾಗುತ್ತದೆ.
ಈ ಕ್ರಮವು ಕೈದಿಗಳ ಆಯ್ಕೆಯ ಬ್ಯಾರಕ್ಗಳಿಗೆ ಕಡಿವಾಣ ಹಾಕುತ್ತದೆ. ಅಲ್ಲದೆ, ಮೊಬೈಲ್ ಫೋನ್ಗಳ ಅಕ್ರಮ ಬಳಕೆ ಮತ್ತು ಜೈಲಾಧಿಕಾರಿಗಳ ಮೂಲಕ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೂ ಈ ವ್ಯವಸ್ಥೆ ಬ್ರೇಕ್ ಹಾಕಲಿದೆ.
ಹಿರಿಯ ಕೈದಿಗಳು ತಮ್ಮ ಪ್ರಭಾವ ಬಳಸಿಕೊಂಡು ತಮ್ಮಿಷ್ಟದ ಸೆಲ್ಗಳನ್ನು ಪಡೆಯುವುದನ್ನು ಮತ್ತು ಇತರ ಕೈದಿಗಳೊಂದಿಗೆ ಡೀಲ್ ಮಾಡುವುದನ್ನು ಈ ಹೊಸ ನಿಯಮಗಳು ತಡೆಯಲಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ಹೊಸ ನಿಯಮ ಜಾರಿಯಾಗಿದೆ.

