ಕೊಡಗಿನ ಪ್ರಸಿದ್ಧ ದುಬಾರೆ ಆನೆ ಬಿಡಾರದಲ್ಲಿ ಸೋಮವಾರ ನಡೆದ ದಸರಾ ಆನೆಗಳ ಭೀಕರ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ (52) ಸಾಕಾನೆಯು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದೆ.
ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ‘ಕಂಜನ್’ ಆನೆಯೊಂದಿಗೆ ನಡೆದ ಭೀಕರ ಕಾದಾಟದ ವೇಳೆ ಮಾರ್ತಾಂಡ ತೀವ್ರವಾಗಿ ಗಾಯಗೊಂಡು ನೆಲಕ್ಕೆ ಉರುಳಿತ್ತು. ಈ ದುರಂತದಲ್ಲಿ ಈಗಾಗಲೇ ತಮಿಳುನಾಡು ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದೀಗ ಬಿಡಾರದ ಪ್ರಮುಖ ಸಾಕಾನೆಗಳಲ್ಲಿ ಒಂದಾಗಿದ್ದ ಮಾರ್ತಾಂಡ ಕೂಡ ಸಾವನ್ನಪ್ಪಿರುವುದು ಅರಣ್ಯ ಇಲಾಖೆ ಹಾಗೂ ಆನೆ ಪ್ರೇಮಿಗಳಲ್ಲಿ ತೀವ್ರ ಶೋಕ ಮೂಡಿಸಿದೆ.
ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಸಾಕಾನೆಗಳ ನಡುವೆ ನಡೆದ ಭೀಕರ ಕಾದಾಟ ಮತ್ತು ಪ್ರವಾಸಿ ಮಹಿಳೆಯ ಸಾವಿನ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಾವೇರಿ ನದಿ ದಾಟಿಸುವ ಬೋಟಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ನದಿ ತೀರಕ್ಕೆ ಬರದಂತೆ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಭೀಕರ ದುರಂತದಲ್ಲಿ ಮೃತಪಟ್ಟ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ನು (ತುಳಸಿ) ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 20 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಪತ್ನಿಯ ಸಾವಿನ ತೀವ್ರ ದುಃಖದಲ್ಲೂ ಆಕೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಪತಿ ಜೋಯೆಲ್ ಸಮಾಜಕ್ಕೆ ಮಾನವೀಯತೆಯ ಸಂದೇಶ ನೀಡಿದ್ದಾರೆ.
ಪ್ರವಾಸಿಗರ ನೆಚ್ಚಿನ ತಾಣವಾದ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ಭೀಕರ ದುರಂತವೊಂದು ಸಂಭವಿಸಿದೆ. ಆನೆಗಳಿಗೆ ಸ್ನಾನ ಮಾಡಿಸುವ (Elephant Bathing) ಪ್ರಕ್ರಿಯೆಯ ವೇಳೆ ಎರಡು ಸಾಕಾನೆಗಳ ನಡುವೆ ಇದ್ದಕ್ಕಿದ್ದಂತೆ ಭೀಕರ ಕಾಳಗ ಆರಂಭವಾಗಿದ್ದು, ಈ ವೇಳೆ ಆನೆಗಳ ಅಡಿಯಲ್ಲಿ ಸಿಲುಕಿ ಪ್ರವಾಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು? ಎಲಿಫೆಂಟ್ ಬಾತಿಂಗ್ ವೇಳೆ ದುರಂತ
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದುಬಾರೆ ಆನೆ ಶಿಬಿರಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡಿದ್ದರು. ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯವನ್ನು ವೀಕ್ಷಿಸಲು ನದಿಯ ದಡದಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಈ ವೇಳೆ ಶಿಬಿರದ ಸಾಕಾನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಇದ್ದಕ್ಕಿದ್ದಂತೆ ಜಗಳ ಆರಂಭವಾಗಿದೆ. ಕಂಜನ್ ಆನೆಯು ಮತ್ತೊಂದು ಆನೆಗೆ ಜೋರಾಗಿ ತಿವಿದಾಗ ಎರಡೂ ಆನೆಗಳ ನಡುವೆ ಭೀಕರ ಕಾದಾಟ ಶುರುವಾಗಿದೆ. ಆನೆಗಳ ನಡುವೆ ಜಗಳ ತಾರಕಕ್ಕೇರಿದಾಗ ಗಜರಾಜನೊಂದು ಹತೋಟಿ ತಪ್ಪಿ ಪ್ರವಾಸಿಗರಿದ್ದ ಕಡೆ ನುಗ್ಗಿದೆ. ಈ ವೇಳೆ ಓಡಲು ಸಾಧ್ಯವಾಗದೆ ಆನೆಯ ಬೃಹತ್ ಗಾತ್ರದ ಭಾರಕ್ಕೆ ಸಿಲುಕಿದ ತಮಿಳುನಾಡಿನ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜ್ಯುನೇಶ್ (33) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

