ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದ ‘ಪಂಚ್’ ಹೆಸರಿನ ಕೋತಿಯ ಗೂಡಿಗೆ ಅಮೆರಿಕದ ಇಬ್ಬರು ಪ್ರವಾಸಿಗರು ಅಕ್ರಮವಾಗಿ ನುಗ್ಗಿದ್ದು, ಜಪಾನ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಒಬ್ಬ ಯುವಕ ವಿಚಿತ್ರವಾದ ಕಾಸ್ಟ್ಯೂಮ್ ಧರಿಸಿ ಗೂಡಿನೊಳಗೆ ಪ್ರವೇಶಿಸಿದರೆ, ಮತ್ತೊಬ್ಬ ಈ ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಪ್ರವಾಸಿಗರ ಈ ಬೇಜವಾಬ್ದಾರಿತನದ ಸಾಹಸದ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಭಾರಿ ವೈರಲ್ ಆಗಿವೆ. ಘಟನೆಯಲ್ಲಿ ಮೃಗಾಲಯದ ಕೋತಿಗಳಿಗೆ ಯಾವುದೇ ರೀತಿಯ ಗಾಯ ಅಥವಾ ತೊಂದರೆಯಾಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.
ವೈರಲ್ ಸ್ಟಂಟ್ ಮತ್ತು ಬಂಧನ ಟೋಕಿಯೋ ಉಪನಗರದ ಚಿಬಾ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಬಂಧಿತರನ್ನು ಅಮೆರಿಕ ಮೂಲದ ರೇಡ್ ಜಹನಾಯ್ ಡೇಸನ್ ಮತ್ತು ನೀಲ್ ಜಬಹ್ರಿ ದುವಾನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬಾತ ಮೃಗಾಲಯದ ಭದ್ರತಾ ಬೇಲಿಯನ್ನು ಜಿಗಿದು ಕೋತಿಯ ಗೂಡಿನೊಳಗೆ ಪ್ರವೇಶಿಸಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ನೀಲಿ ಬಣ್ಣದ ಸೂಟ್ ಮತ್ತು ಮುಖಕ್ಕೆ ಸ್ಮೈಲಿ ಎಮೋಜಿ ಮಾಸ್ಕ್ ಧರಿಸಿ ಗೂಡಿನೊಳಗೆ ಓಡಾಡುತ್ತಿರುವುದು ಕಂಡುಬಂದಿದೆ.
ಈ ಕೃತ್ಯ ನಡೆಯುತ್ತಿದ್ದಂತೆ ಎಚ್ಚೆತ್ತ ಮೃಗಾಲಯದ ಅಧಿಕಾರಿಗಳು ತಕ್ಷಣವೇ ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃಗಾಲಯದ ದೈನಂದಿನ ವ್ಯವಹಾರಗಳಿಗೆ ಮತ್ತು ಭದ್ರತೆಗೆ ಧಕ್ಕೆ ತಂದ ಆರೋಪದಡಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆದರೆ ಬಂಧಿತ ಪ್ರವಾಸಿಗರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಯಾರು ಈ ವೈರಲ್ ಕೋತಿ ಪಂಚ್? ಇಚಿಕಾವಾ ಮೃಗಾಲಯದ ‘ಪಂಚ್’ ಹೆಸರಿನ ಈ ಚಿಕ್ಕ ಕೋತಿ ಕಳೆದ ಫೆಬ್ರವರಿಯಲ್ಲಿ ಜಗತ್ತಿನಾದ್ಯಂತ ಭಾರೀ ಸದ್ದು ಮಾಡಿತ್ತು. ತಾಯಿಯಿಂದ ತಿರಸ್ಕಾರಕ್ಕೊಳಗಾಗಿದ್ದ ಈ ಕೋತಿಯನ್ನು ಮೃಗಾಲಯದ ಇತರ ಕೋತಿಗಳು ಕೂಡ ತಮ್ಮ ಗುಂಪಿಗೆ ಸೇರಿಸಿಕೊಳ್ಳದೆ ದೂರ ಇಟ್ಟಿದ್ದವು. ಈ ವೇಳೆ ಒಂಟಿಯಾಗಿದ್ದ ಕೋತಿಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಮೃಗಾಲಯದ ಸಿಬ್ಬಂದಿ ದೊಡ್ಡ ಒರಂಗುಟನ್ ಗೊಂಬೆಯನ್ನು ನೀಡಿದ್ದರು. ಈ ಗೊಂಬೆಯನ್ನು ತಬ್ಬಿಕೊಂಡು ಮಲಗುತ್ತಿದ್ದ ಕೋತಿಯ ಭಾವನಾತ್ಮಕ ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದವು. ಇಂತಹ ಜನಪ್ರಿಯ ಕೋತಿಯನ್ನು ನೋಡಲು ಬಂದು ಅಮೆರಿಕ ಪ್ರವಾಸಿಗರು ಈಗ ಜೈಲು ಪಾಲಾಗಿದ್ದಾರೆ.

