ತುಮಕೂರು: ತುಮಕೂರಿನ ಶಿರಾ ತಾಲೂಕಿನಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಮಗಳನ್ನು ಕೊಲೆಗೈದು ಬಳಿಕ ಹಳ್ಳದಲ್ಲಿ ಹೂತು ಹಾ=ಕಿ ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಬಾಲಕಿ ಮೇಘನಾ ನಾಪತ್ತೆ ಪ್ರಕರಣ ಆಘಾತಕಾರಿ ತಿರುವು ಪಡೆದಿದೆ. ತಂದೆ ತಿಮ್ಮರಾಯಪ್ಪನಿಂದಲೇ ಮೇಘನಾ ಕೊಲೆಯಾಗಿದ್ದಾಳೆ.
ಮೇಘನಾ ತಾಯಿ ನಿರ್ಮಲಾ ಸಂಬಂಧಿಯೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಳಂತೆ. ಆದರೆ ಈ ವಿಚಾರ ತಂದೆ ತಿಮ್ಮರಾಯಪ್ಪಗೆ ಇಷ್ಟವಿರಲಿಲ್ಲ. ತಾಯಿಯ ಸಂಬಂಧಿ ಬೇಡ, ಆತನನ್ನು ಬಿಟ್ಟು ಬಿಡುವಂತೆ ಹಲವು ಬಾರಿ ತಂದೆ ಮಗಳಿಗೆ ಬುದ್ಧಿ ಹೇಳಿದ್ದನಂತೆ. ಆದರೂ ಮಗಳು ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದ್ದಳು. ಇದರಿಂದ ತಿಮ್ಮರಾಯಪ್ಪ ಕೋಪಗೊಂಡು ಮಗಳನ್ನೇ ಮುಗಿಸುವ ನಿರ್ಧಾರ ಮಾಡಿದ್ದಾನೆ.
ಏಪ್ರಿಲ್ 16ರಂದು ಮಗಳನ್ನು ಜಮೀನಿನ ಬಳಿ ಮಾತನಾಡಲು ಕರೆದಿದ್ದಾನೆ. ತಂದೆ ಮಾತು ಕೇಳಿ ಮಗಳು ಜಮೀನಿಗೆ ಹೋಗಿದ್ದಾಳೆ. ಈ ವೇಳೆ ತಂದೆ-ಮಗಳ ನಡುವೆ ಮಾತಿಗೆ ಮಾತು ಶುರುವಾಗಿ ಮಗಳನ್ನು ಬಾವಿಗೆ ತಳ್ಳಿದ್ದಾನೆ. ಮೇಲಿನಿಂದ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ. ಮೃತದೇಹವನ್ನು ಹಳ್ಳದಲ್ಲಿ ಹೂತಿಟ್ಟಿದ್ದಾನೆ.
ಬಳಿಕ ಮರುದಿನ ಪೊಲೀಸ್ ಠಾಣೆಗೆ ಬಂದು ಮಗಳು ಕಾಣುತ್ತಿಲ್ಲ, ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರಿಗೆ ತಂದೆ ತಿಮ್ಮರಾಯಪ್ಪನ ಮೇಲೆಯೇ ಅನುಮಾನ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಗಳ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ.

