ಕಲಬುರಗಿ: ನಿವೃತ್ತ ಸೈನಿಕರೊಬ್ಬರ ತಲೆಗೆ ಕಬ್ಬಿಣ ರಾದ್ ನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ರಾಮಮಂದಿರ ಬಳಿ ನಡೆದಿದೆ.
ರವಿಚಂದ್ರ ಖೇಡ (45) ಕೊಲೆಯಾದ ನಿವೃತ್ತ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. ವಿವಾದಿತ ಖಾಸಗಿ ಜಾಗದಲ್ಲಿ ರವಿಚಂದ್ರ ಅವರನ್ನು ಹತ್ಯೆ ಮಾಡಲಾಗಿದೆ.
ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್ ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿಸಿ ರಾತ್ರೋರಾತ್ರಿ ಜೆಸಿಬಿಯಿಂದ ಶೆಡ್ ಕೆಡವಲಾಗಿತ್ತು.ಇದೇ ವಿಚಾರವಾಗಿ ವಿರೋಧಿ ಗುಂಪಿನಿಂದ ರವಿಚಂದ್ರ ಅವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಂಡವರ ಜಾಗಕ್ಕೆ ಬೇಲಿ ಹಾಕುವ ಗ್ಯಾಂಗ್ ನಿಂದ ಈ ಕೃತ್ಯ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಮೃತ ರವಿಚಂದ್ರ ಖೇಡ, ಆಳಂದ ತಾಲೂಕಿನ ಹಡಲಗಿ ನಿವಾಸಿ. ನಾಲ್ಕು ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತಿಯಾಗಿ ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ.

