ಪಣಜಿ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಮೇ ೩ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆಯಲ್ಲಿ ಮತ್ತೆ ಮರು ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದರೂ ಆಕಾಂಕ್ಷಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ. ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶದಲ್ಲಿ ನೀಟ್ ಆಕಾಂಕ್ಷಿಗಳು ಸಾವಿಗೆ ಶರಣಾಗಿರುವ ಬೆನ್ನಲ್ಲೇ ಗೋವಾದಲ್ಲಿಯೂ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಕ್ಷಿಣ ಗೋವಾದ ಮಾರ್ಗೋವ್ ನಲ್ಲಿ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೀಟ್ ಪರೀಕ್ಷೆ ರದ್ದುಗೊಂದ ಕಾರಣಕ್ಕೆ ಒತ್ತಡಕ್ಕೆ ಬೇಸತ್ತು ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ.
ಸಾವಿಗೂ ಮುನ್ನ ವಿದ್ಯಾರ್ಥಿ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಶೈಕ್ಷಣಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾನೆ. ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ 3ರಂದು ನಡೆದಿದ್ದ ಪರೀಕ್ಷೆ ರದ್ದುಗೊಳಿಸಿತ್ತು. ಜೂನ್ ೨೧ರಂದು ಮರು ಪರೀಕ್ಷೆ ನಿಗದಿ ಮಾಡಿ ಘೋಷಿಸಲಾಗಿದೆ. ಅಲ್ಲದೇ ಮುಂದಿನ ವರ್ಷದಿಂದ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸುವುದಾಗಿಯೂ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಒತ್ತಡಕ್ಕೆ ಸಿಲುಕಿರುವ ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ನೀಟ್ ಆಕಾಂಕ್ಷಿ 21 ವರ್ಷದ ರಿತಿಕ್ ಮಿಶ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಖೀಂಪುರ ಬೀದಿಯ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವರ್ಷ ಮೂರನೇ ಬಾರಿಗೆ ರಿತಿಕ್ ನೀಟ್ ಪರೀಕ್ಷೆ ಬರೆದಿದ್ದರು. ಈ ಬಾರಿ ಪಾಸ್ ಆಗಿ ತಾನು ವೈದ್ಯನಾಗುವ ವಿಶ್ವಾಸದಲ್ಲಿದ್ದರು. ಆದರೆ ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ನೇಣಿಗೆ ಶರಣಾಗಿದ್ದಾರೆ. ಮಗನ ಸಾವಿಗೆ ತಂದೆ ಅನೂಪ್ ಮಿಶ್ರಾ ಕಣ್ಣೀರಿಟ್ಟಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯ ಆದರ್ಶ್ ನಗರದಲ್ಲಿ ವಿದ್ಯಾರ್ಥಿನಿ ಅನಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನಿಕಾ 2024, 2025, 2026ರಲ್ಲಿ ನೀಟ್ ಪರೀಕ್ಷೆ ಬರೆದಿದ್ದರು. ಆದರೆ ಈಗ ಏಕಾಏಕಿ ಮನೆಯಲ್ಲಿಯೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯನ್ನೂ ನಡೆಸದೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದ್ದು, ಸಾಅಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ರಾಜಸ್ಥಾನದಲ್ಲಿ ನೀಟ್ ಆಕಾಂಕ್ಷಿಯ ಮೊದಲ ಬಲಿಯಾಗಿದೆ. ನೀಟ್ ಆಕಾಂಕ್ಷಿ ಪ್ರದೀಪ್ ಮಹೀಚ್ ಎಂಬಾತ ಜುಂಜುನು ಜಿಲ್ಲೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಗೈದ್ದಾರೆ.
ಈ ಬಾರಿ ನೀಟ್ ನಲ್ಲಿ 650 ಅಂಕಗಳನ್ನು ಪಡೆಯುವ ನಿರೀಕ್ಷೆಯಲ್ಲಿ ಪ್ರದೀಪ್ ಇದ್ದರು. ಆದರೆ ಬರೆದ ಪರೀಕ್ಷೆ ರದ್ದಾದ ಬೆನ್ನಲ್ಲೇ ಆಘಾತಕ್ಕೊಳಗಾದ ಪ್ರದೀಪ್, ಮರು ಪರೀಕ್ಷೆ ನಿಗದಿಯಾಗಿದ್ದರೂ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

