ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಧನ ದರಗಳು (Fuel Prices) ಗಗನಕ್ಕೇರುತ್ತಿವೆ. ಈ ಇಂಧನ ಬೆಲೆ ಏರಿಕೆಯ ಪ್ರಭಾವವು ವಿಮಾನಯಾನ ಸಂಸ್ಥೆಗಳ ಮೇಲೂ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ, ವಿಮಾನಯಾನ ಸಂಸ್ಥೆಗಳು ತಮ್ಮ ಫ್ಲೈಟ್ ಸೇವೆಗಳನ್ನು ಕಡಿತಗೊಳಿಸಲು ಯೋಜಿಸುತ್ತಿವೆ. ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ, ಪ್ರತಿದಿನ ಸುಮಾರು 100 ವಿಮಾನ ಸೇವೆಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ, ಜೂನ್‌ನಿಂದ ಮೂರು ತಿಂಗಳ ಕಾಲ ಹಲವಾರು ಅಂತರಾಷ್ಟ್ರೀಯ ಸೇವೆಗಳನ್ನು ಕಡಿತಗೊಳಿಸುವುದಾಗಿ ಸಂಸ್ಥೆ ತಿಳಿಸಿದೆ.
ದೆಹಲಿಯಿಂದ ಚಿಕಾಗೋ, ನೆವಾರ್ಕ್, ಸಿಂಗಾಪುರ ಮತ್ತು ಶಾಂಘೈ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.ಸ್ಯಾನ್ ಫ್ರಾನ್ಸಿಸ್ಕೋ, ಪ್ಯಾರಿಸ್ ಮತ್ತು ಟೊರೊಂಟೊ ನಗರಗಳಿಗೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ. ಏವಿಯೇಷನ್ ಟರ್ಬೈನ್ ಫ್ಯೂಯಲ್ ದರಗಳು ವಿಪರೀತವಾಗಿ ಏರುತ್ತಿರುವುದರಿಂದ, ವೇಳಾಪಟ್ಟಿಯನ್ನು ಕಡಿತಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಿಳಿಸಿದ್ದಾರೆ. ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳು ಸುದೀರ್ಘ ಮಾರ್ಗಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.
ಇದರಿಂದಾಗಿ ಇಂಧನ ಬಳಕೆ ಮತ್ತು ಸಿಬ್ಬಂದಿ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿದ್ದು, ವಿಮಾನಗಳ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಬೆಲೆಗಳು ಇದೇ ರೀತಿ ಏರುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಏರ್ ಇಂಡಿಯಾ ಸಿಇಒ ಎಚ್ಚರಿಸಿದ್ದಾರೆ.

