ದಾವಣಗೆರೆ: ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರಸ್ತುತ ಕೇವಲ 4 ರಿಂದ 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ರೈತರಿಗೆ ನಿರಂತರವಾಗಿ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ಕ್ರಮವಹಿಸುವಂತೆ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ ಅವರು ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ‘ಪಂಚ ಗ್ಯಾರಂಟಿ’ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಸರದಿ ಸಾಲು ಪದ್ದತಿಯಡಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಿಗದಿತ ಅವಧಿಯವರೆಗೆ ಗುಣಮಟ್ಟದ ವಿದ್ಯುತ್ ನೀಡಲು ಆದ್ಯತೆ ನೀಡಬೇ̧ಕು ರೈತರು ಹಗಲು ಅಥವಾ ರಾತ್ರಿ ಎನ್ನದೆ ದುಡಿಯುವುದರಿಂದ, ಅವರಿಗೆ ನಿಗದಿತ ಅವಧಿಯಲ್ಲಿ ಅಡಚಣೆಯಿಲ್ಲದ ವಿದ್ಯುತ್ ಸಿಕ್ಕರೆ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯವಾಗುತ್ತದೆ ಎಂದರು.
Text Box: ನಿರಾಕ್ಷೇಪಣಾ ಪತ್ರದ (NOC) ಅಗತ್ಯವಿಲ್ಲ
ಪ್ರಸ್ತುತ 30×40 ಹಾಗೂ ಅದಕ್ಕಿಂತ ಕಡಿಮೆ ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾದ ಮನೆಗಳಿಗೆ ಸುಲಭವಾಗಿ ವಿದ್ಯುತ್ ಸಂಪರ್ಕ ಸಿಗುತ್ತಿದೆ. ಈ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ ಪಡೆಯಲು ಯಾವುದೇ ನಿರಾಕ್ಷೇಪಣಾ ಪತ್ರದ (NOC) ಅಗತ್ಯವಿರುವುದಿಲ್ಲ. ಒಂದು ವೇಳೆ ಈ ನಿಯಮದ ಅಡಿಯಲ್ಲೂ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ವಿಳಂಬ ಮಾಡಿದರೆ ಅಥವಾ ತೊಂದರೆ ನೀಡಿದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದ್ದಾರೆ.
ಜಗಳೂರಿನ 156 ಮನೆಗಳ ಸಮಸ್ಯೆ: ಜಗಳೂರು ತಾಲ್ಲೂಕಿನಲ್ಲಿ 30×40 ಮತ್ತು ಅದಕ್ಕಿಂತ ಕಡಿಮೆ ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾದ ಸುಮಾರು 156 ಮನೆಗಳಿಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ ನೀಡುತ್ತಿಲ್ಲ ಎಂಬ ವಿಷಯವನ್ನು ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ, ನಿಯಮಾನುಸಾರ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.
ಅನ್ನಭಾಗ್ಯ ಯೋಜನೆ: ಜಿಲ್ಲೆಯಲ್ಲಿ ಜುಲೈ 2023 ರಿಂದ ಡಿಸೆಂಬರ್ 2024 ರವರೆಗೆ ಜಿಲ್ಲೆಯಲ್ಲಿ ಒಟ್ಟು ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳ ಸಂಖ್ಯೆ 6019398 ಹಾಗೂ ಒಟ್ಟು ಅರ್ಹ ಫಲಾನುಭವಿಗಳ ಸಂಖ್ಯೆ 21770105 ಇದ್ದು, 346334790 ಅನುಮೋದಿಸದ ಮೊತ್ತವಾಗಿದೆ. ಫೆಬ್ರವರಿ 2025 ರಿಂದ ಏಪ್ರಿಲ್ 2026 ರವರೆಗೆ 357191 ಅಂತ್ಯೋದಯ ಪಡಿತರ ಚೀಟಿಗಳಿಗೆ, 1738979 ಎಎವೈ ಸದಸ್ಯರ ಸಂಖ್ಯೆಗೆ 776737.53 ಕ್ವಿಂಟಾಲ್ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ.
ಹಾಗೂ ಬೇಸಿಗೆಯ ತೀವ್ರತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ, ಸಾರ್ವಜನಿಕರು ಮತ್ತು ವಯೋವೃದ್ಧರು ಪಡಿತರ ಪಡೆಯಲು ಬಿಸಿಲಿನಲ್ಲಿ ಸಾಲು ನಿಲ್ಲುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 1 ರಿಂದ ಜಾರಿಗೆ ಬರುವಂತೆ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಸಭೆಗೆ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್ ಅವರು ಸಭೆಗೆ ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆ : ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಆಗಸ್ಟ್ 2023 ರಿಂದ ಫೆಬ್ರವರಿ 2026 ರವರೆಗೆ ಜಿಲ್ಲೆಯ ಒಟ್ಟು 3,74,581 ನೋಂದಾಯಿತ ಫಲಾನುಭವಿಗಳಿಗೆ 29 ಕಂತುಗಳಲ್ಲಿ ಒಟ್ಟು ₹2053.08 ಕೋಟಿ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಪಾವತಿಸಲಾಗಿದೆ.
ಮರುಜಮೆ ಕ್ರಮ: ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತರಾಗಿದ್ದವರಲ್ಲಿ ಈವರೆಗೆ ಮೃತಪಟ್ಟಿರುವ 3,883 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅವರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು ₹36 ಲಕ್ಷ ಹಣವನ್ನು ಬ್ಯಾಂಕ್‌ಗಳ ಮೂಲಕ ಯಶಸ್ವಿಯಾಗಿ ಸರ್ಕಾರಕ್ಕೆ ಮರುಜಮೆ ಮಾಡಲಾಗಿದೆ.
ಜೀವಿತ ಪ್ರಮಾಣಪತ್ರ: ವಿವಿಧ ಯೋಜನೆಯ ಫಲಾನುಭವಿಗಳು ತಮ್ಮ ಜೀವಿತ ಪ್ರಮಾಣಪತ್ರವನ್ನು (Life Certificate) ಸಲ್ಲಿಸುವ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ನಿರೀಕ್ಷಿಸಲಾಗುತ್ತಿದೆ. ಆದೇಶ ಬಂದ ತಕ್ಷಣ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರಾಜಾನಾಯ್ಕ ಅವರು ತಿಳಿಸಿದರು.
ಗೃಹಜ್ಯೋತಿ ಯೋಜನೆ : ಮಾರ್ಚ್ 2026 ರ ಮಾಹೆಯಲ್ಲಿ 515747 ಫಲಾನುಭಿಗಳ ಸಂಖ್ಯೆ ಇದ್ದು , ರೂ. 24.26 ಕೋಟಿ ಹಣವನ್ನು ವ್ಯಹಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿಯನ್ನು ನೀಡಿದರು.
ಸಭೆಯ ಸದಸ್ಯರು ಬೆಸ್ಕಾಂ ಅಧಿಕಾರಿಗಳು ಹೊಸದಾಗಿ ವಿದ್ಯುತ್ ಸಂಪರ್ಕ ಕೋರಿ ಮನವಿ ಸಲ್ಲಿಸಿದರೆ ವಿನಾಕರಣ ಸಂಪರ್ಕ ನೀಡಲು ತಡ ಮಾಡುತ್ತಿರುವುದು ಸದಸ್ಯರುಗಳ ಗಮನಕ್ಕೆ ಬಂದಿದೆ ಇನ್ನು ಮುಂದೆ ಯಾವುದೇ ತೊಂದರೆ ನೀಡದೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಶಕ್ತಿ ಯೋಜನೆ : ಜೂನ್ 2023 ರಿಂದ ಏಪ್ರಿಲ್ 2026 ರವರೆಗೆ ಒಟ್ಟು 14,31,64,455 ಜನ ಪ್ರಯಾಣಿಸಿದ್ದು, 424 ಕೋಟಿ ರೂ.ಗಳ ಪ್ರಯಾಣ ದರ ತಗಲಿದೆ ಈ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ 1,35,850 ಜನ ಪ್ರಯಾಣಿಸುತ್ತಿದ್ದಾರೆ ಎಂದು ಸಭೆಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸಭೆಗೆ ಮಾಹಿತಿಯನ್ನು ನೀಡಿದರು.
101 ಮತ್ತು 102ನೇ ಮಾರ್ಗಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಪ್ರಸ್ತುತ ಪ್ರತಿ ಬಸ್ಸಿನಲ್ಲಿ ಅಂದಾಜು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ,” ಎಂದು ಸಮಿತಿಯ ಉಪಾಧ್ಯಕ್ಷರಾದ ರಾಜೇಶ್ವರಿ ಅವರು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಲು ಅನುಕೂಲವಾಗುವಂತೆ ಈ ಮಾರ್ಗಗಳಲ್ಲಿ ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಬೇಕು. ಈ ಮೂಲಕ ಬಸ್‌ಗಳ ಒಳಗಿನ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಗಳೂರು ಬಸ್ ನಿಲ್ದಾಣದ ದುಃಸ್ಥಿತಿಯ ಬಗ್ಗೆ ಚರ್ಚಿಸಿದ ಸದಸ್ಯರುಗಳು, “ಜಗಳೂರಿನಲ್ಲಿ ಪ್ರಯಾಣಿಕರಿಗೆ ಸರಿಯಾಗಿ ನಿಲ್ಲಲು ಸ್ಥಳಾವಕಾಶವಿಲ್ಲದೆ ಸಾರ್ವಜನಿಕರು ಬಿಸಿಲಿನಲ್ಲಿಯೇ ಬಸ್‌ಗಳಿಗಾಗಿ ಕಾಯುವಂತಾಗಿದೆ. ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವುದರಿಂದ ಇದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು,” ಎಂದು ಆತಂಕ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ತಕ್ಷಣವೇ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಬೇಕು. ಪ್ರಯಾಣಿಕರಿಗೆ ಕುಡಿಯುವ ನೀರು ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಅವರು ಸಭೆಯಲ್ಲಿ ತಿಳಿಸಿದರು.
ತಾತ್ಕಾಲಿಕ ಶೆಡ್ ನಿರ್ಮಿಸಲು ರೂ. 10.00 ಲಕ್ಷ ಗಳು ಮಂಜೂರಾಗಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಸಭೆಗೆ ತಿಳಿಸಿದರು.
ಯುವನಿಧಿ ಯೋಜನೆ: ಜಿಲ್ಲೆಯ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ‘ಯುವನಿಧಿ’ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು ₹36.79 ಕೋಟಿಗೂ ಅಧಿಕ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ̤
ಪದವಿ ಫಲಾನುಭವಿಗಳು: ಜಿಲ್ಲೆಯ 12,069 ಪದವೀಧರರಿಗೆ ₹36.50 ಕೋಟಿ ಮೊತ್ತ ಪಾವತಿಸಲಾಗಿದೆ.
ಡಿಪ್ಲೊಮಾ ಫಲಾನುಭವಿಗಳು: 263 ಡಿಪ್ಲೊಮಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ₹29.71 ಲಕ್ಷ ಹಣ ವರ್ಗಾವಣೆಯಾಗಿದೆ
ತಾಂತ್ರಿಕ ದೋಷಗಳ ಇತ್ಯರ್ಥಕ್ಕೆ ಕ್ರಮ: ಕೆಲವು ವಿದ್ಯಾರ್ಥಿಗಳಿಗೆ 180 ದಿನ ಕಳೆದರೂ ಹಣ ಜಮೆಯಾಗದಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, “ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhar Seeding) ಆಗದಿರುವುದು ಅಥವಾ ಕೆವೈಸಿ (KYC) ತಾಂತ್ರಿಕ ದೋಷಗಳು ಇದಕ್ಕೆ ಮುಖ್ಯ ಕಾರಣವಾಗಿದ್ದು, ಅಂತಹ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠ್ಠಲರಾವ್ ಅವರು ಮಾತನಾಡಿ, “ಪ್ರಸ್ತುತ ಸಾಲಿನ ಪದವಿ ಮತ್ತು ಡಿಪ್ಲೊಮಾ ಫಲಿತಾಂಶಗಳು ಹೊರಬಂದಿದ್ದು, ಹೆಚ್ಚಿನ ನಿರುದ್ಯೋಗಿಗಳು ಯೋಜನೆಯಡಿ ನೋಂದಾಯಿಸಿಕೊಳ್ಳಲು ಅರ್ಹರಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಬ್ಯಾನರ್ ಮತ್ತು ಪೋಸ್ಟರ್‌ಗಳ ಮೂಲಕ ಜಾಗೃತಿ ಮೂಡಿಸಿ, ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು” ಬಸವಪಟ್ಟಣದ ಕಾಲೇಜಿನಲ್ಲಿ ಕೂಡಲೇ ನೋಂದಣಿ ಶಿಬಿರ Text Box: ಅಧಿಕಾರಿಗಳ ನಡೆ ಹಳ್ಳಿಗಳ ಕಡೆ ಯಡಿ ಜಿಲ್ಲೆಯ 600 ಹಳ್ಳಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು, ಕುಡಿಯುವ ನೀರು, ಸ್ವಚ್ಚತೆ, ಇ-ಸ್ವತ್ತು ಮುಂತಾದ ಸಮಸ್ಯೆಗಳಿಗೆ ರೈತರೊಂದಿಗೆ ಸಂವಾದ ಮಾಡಿದ್ದು, ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾದ ಕುಕ್ಕವಾಡ ಮಂಜಣ್ಣ, ನಂಜಾ ನಾಯ್ಕ್ , ರಾಜೇಶ್ವರಿ, ಅನಿಸ್ ಪಾಷಾ, ಚಂದ್ರಶೇಖರ್ ಸಮಿತಿಯ ಸದಸ್ಯರುಗಳಾದ ಡೋಲಿ ಚಂದ್ರು, ನಾಗರಾಜ್, ಶ್ರೀನಿವಾಸ್ ಚನ್ನಗಿರಿ, ಬಾತಿ ಉಮೇಶ್, ಶಿವಶಂಕರ್ ಕೈದಾಳ್, ಜಗಳೂರು ಷಂಷಿರ್ ಅಹಮದ್, ರಾಘವ ಗೌಡ, ಲಿಯಾಕತ್ ಅಲಿ, ಅಲಿ ರೆಹಮತ್, ಶಿವರಾಂ ನಾಯ್ಕ್, ನೀಲಗಿರಿಯಪ್ಪ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

