ವಿಶ್ವಪ್ರಸಿದ್ಧ ಕಾನ್ ಫಿಲ್ಮ್ ಫೆಸ್ಟಿವಲ್ 2026ರಲ್ಲಿ ಭಾಗವಹಿಸಲು ಬಾಲಿವುಡ್ ಸ್ಟಾರ್ ಆಲಿಯಾ ಭಟ್ ಫ್ರಾನ್ಸ್ ತಲುಪಿದ್ದಾರೆ. ಕಳೆದ ಬಾರಿ ತಮ್ಮ ವಿಭಿನ್ನ ಫ್ಯಾಷನ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಆಲಿಯಾ, ಈ ಬಾರಿ ರೆಡ್ ಕಾರ್ಪೆಟ್ ಮೇಲೆ ಯಾವ ರೀತಿ ಮಿಂಚಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಅದರಲ್ಲೂ ಕಳೆದ ವರ್ಷ ಅವರು ಧರಿಸಿದ್ದ ‘ಗುಚ್ಚಿ’ ಬ್ರ್ಯಾಂಡ್‌ನ ಸೀರೆ ಶೈಲಿಯ ಗೌನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು.
ಪವರ್‌ಫುಲ್ ಲುಕ್‌ನಲ್ಲಿ ಆಲಿಯಾ ಎಂಟ್ರಿ ಫ್ರಾನ್ಸ್‌ನ ನೈಸ್ ವಿಮಾನ ನಿಲ್ದಾಣದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡ ರೀತಿ ಅವರ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಕೆರೊಲಿನಾ ಹೆರೆರಾ ವಿನ್ಯಾಸದ ಕಪ್ಪು ಬಣ್ಣದ ಬ್ಲೇಜರ್ ಮತ್ತು ಸ್ಕಿನ್ನಿ ಪ್ಯಾಂಟ್ ಧರಿಸಿದ್ದ ಆಲಿಯಾ, ಅತ್ಯಂತ ವೃತ್ತಿಪರ ಹಾಗೂ ಆತ್ಮವಿಶ್ವಾಸದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಆರಂಭವಷ್ಟೇ ಆಗಿದ್ದು, ರೆಡ್ ಕಾರ್ಪೆಟ್ ಮೇಲೆ ಅವರು ಯಾವ ಅಚ್ಚರಿ ಕಾಯ್ದಿರಿಸಿದ್ದಾರೆ ಎಂಬುದು ಈಗ ಕಾತರದ ವಿಷಯವಾಗಿದೆ.
ಕಳೆದ ಬಾರಿಯ ದಾಖಲೆ ಮುರಿಯುತ್ತಾರಾ? 2025ರ ಕಾನ್ ಫೆಸ್ಟಿವಲ್‌ನಲ್ಲಿ ಆಲಿಯಾ ಭಟ್ ಅವರ ಫ್ಯಾಷನ್ ಪ್ರಯೋಗಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದವು. ಸ್ಕಿಯಾಪರೆಲ್ಲಿಯ ಮರ್ಮೇಯ್ಡ್ ಗೌನ್‌ನಲ್ಲಿ ಮಿಂಚಿದ್ದ ಅವರು, ನಂತರ ಗುಚ್ಚಿ ಸರಣಿಯ ಸೀರೆ ಮಾದರಿಯ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಭಾರತೀಯ ಸಂಪ್ರದಾಯದ ಸೀರೆ ಉಡುವ ಶೈಲಿಯನ್ನು ಪಾಶ್ಚಿಮಾತ್ಯ ಗೌನ್ ಜೊತೆ ಬೆರೆಸಿದ್ದ ಆ ಫೋಟೋಗಳು ಸಿನಿವಲಯದಲ್ಲಿ ಈಗಲೂ ಚರ್ಚೆಯಲ್ಲಿದೆ.
ಸದ್ಯದ ಮಟ್ಟಿಗೆ ಆಲಿಯಾ ಭಟ್ ಅವರಿಗೆ ಅವರೇ ದೊಡ್ಡ ಸ್ಪರ್ಧಿಯಾಗಿದ್ದಾರೆ. ಕಳೆದ ಬಾರಿಯ ಆ ಐಕಾನಿಕ್ ಲುಕ್ ಅನ್ನು ಈ ವರ್ಷದ ಉಡುಗೆ ಮೀರಿಸಲಿದೆಯೇ? ಅವರು ಮತ್ತೊಮ್ಮೆ ಭಾರತೀಯ ಸೊಗಡನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುತ್ತಾರಾ ಅಥವಾ ಸಂಪೂರ್ಣ ಹೊಸ ಶೈಲಿಯ ಉಡುಗೆಯೊಂದಿಗೆ ಬರಲಿದ್ದಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಂತರಾಷ್ಟ್ರೀಯ ಫ್ಯಾಷನ್ ವಿಮರ್ಶಕರು ಕೂಡ ಆಲಿಯಾ ಅವರ ಈ ಬಾರಿಯ ರೆಡ್ ಕಾರ್ಪೆಟ್ ಎಂಟ್ರಿಗಾಗಿ ಕಾದು ಕುಳಿತಿದ್ದಾರೆ.



