HomeIPL 2026ಸಾಲು ಸಾಲು ಡಾಟ್ ಬಾಲ್ ಆಡಿ ಚೇಸ್ ಮಾಡಲಾಗದೇ ಆರ್‌ಸಿಬಿ ಸೋಲಿಸಿ ಮೈದಾನದಲ್ಲೇ ಸಪ್ಪೆ ಮುಖ...

ಸಾಲು ಸಾಲು ಡಾಟ್ ಬಾಲ್ ಆಡಿ ಚೇಸ್ ಮಾಡಲಾಗದೇ ಆರ್‌ಸಿಬಿ ಸೋಲಿಸಿ ಮೈದಾನದಲ್ಲೇ ಸಪ್ಪೆ ಮುಖ ಹೊತ್ತು ಕುಳಿತ ಶೆಫರ್ಡ್

ನಿನ್ನೆ ( ಮೇ 7 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 9 ರನ್‌ಗಳ ರೋಚಕ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮಳೆಯಿಂದಾಗಿ ಎರಡು ಬಾರಿ ನಿಂತು ನಡೆದ ಪಂದ್ಯದಲ್ಲಿ ಒಂದು ಓವರ್ ಕಡಿತಗೊಂಡು 19 ಓವರ್‌ಗಳ ಪಂದ್ಯ ನಡೆದಿದ್ದು, ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ಲಕ್ನೋ ನೀಡಿದ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಆರಂಭಿಕರು ಕೈಕೊಟ್ಟರು. ಕೇವಲ 9 ರನ್‌ಗೆ ಬೆಥೆಲ್ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಪಡಿಕ್ಕಲ್ ಹಾಗೂ ಪಟಿದಾರ್ ಸುಧಾರಣೆ ತಂದರಾದರೂ ತಂಡವನ್ನು ಗೆಲುವಿನ ಸಮೀಪಕ್ಕೆ ಕರೆತರಲಾಗಲಿಲ್ಲ. ಜಿತೇಶ್ ಶರ್ಮಾ ಮತ್ತೊಮ್ಮೆ ವಿಫಲರಾದರು. ಟಿಮ್ ಡೇವಿಡ್ 17 ಎಸೆತಗಳಲ್ಲಿ 40 ರನ್ ಬಾರಿಸಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಮ್ಮ ಪಾಲಿನ ಕೆಲಸ ಮಾಡಿದರು. ಟಿಮ್ ಔಟ್ ಆದ ಬಳಿಕ ಕಣಕ್ಕಿಳಿದು ಫಿನಿಷಿಂಗ್ ಜವಾಬ್ದಾರಿ ಹೊತ್ತಿದ್ದ ಶೆಫರ್ಡ್ ಸಿಡಿಯಲಿಲ್ಲ. ಶೆಫರ್ಡ್ ಕಣಕ್ಕಿಳಿದಾಗ 21 ಎಸೆತಗಳಲ್ಲಿ 55 ರನ್ ಅಗತ್ಯವಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಣಕ್ಕಿಳಿದ ಮೊದಲ ಎರಡು ಎಸೆತಗಳಿಗೆ ಬೌಂಡರಿ ಬಾರಿಸಿದ ಶೆಫರ್ಡ್ 16ನೇ ಓವರ್‌ನ ಕೊನೆಯ ಎಸೆತದಲ್ಲಿ ಯಾವುದೇ ರನ್ ಬಾರಿಸಲಿಲ್ಲ. ನಂತರ 17ನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಶೆಫರ್ಡ್‌ಗೆ ಪಾಂಡ್ಯ ಬ್ಯಾಟಿಂಗ್ ಕೊಟ್ಟರು. ಆದರೆ ಶೆಫರ್ಡ್ ದೊಡ್ಡ ಹೊಡೆತ ಬಾರಿಸಲಾಗದೇ ಎರಡು ಡಾಟ್ ಬಾಲ್ ಆಡಿ ಸಿಂಗಲ್ ತೆಗೆದುಕೊಂಡರು. ಕೃನಾಲ್ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಚಚ್ಚಿ ಪಂದ್ಯವನ್ನು ಜೀವಂತವಾಗಿರಿಸಿದರು. ಅಲ್ಲಿಗೆ 12 ಎಸೆತಕ್ಕೆ 33 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸಿದ ಶೆಫರ್ಡ್ ಒಂದು ಸಿಕ್ಸರ್ ಬಾರಿಸಿದ್ದು ಬಿಟ್ಟರೆ ಎರಡು ಡಾಟ್ ಬಾಲ್ ಆಡಿದರು. ಕೊನೆಯ ಓವರ್‌ನಲ್ಲಿ 20 ರನ್ ಬೇಕಿದ್ದಾಗ ದಿಗ್ವೇಶ್ ರಾಠಿಯಂತ ದುಬಾರಿ ಬೌಲರ್‌ ಕೈಗೆ ಚೆಂಡನ್ನು ನೀಡಲಾಯಿತಾದರೂ ಶೆಫರ್ಡ್ ಸಿಡಿಯಲಿಲ್ಲ. ಮೊದಲ ಎಸೆತವನ್ನು ಕನೆಕ್ಟ್ ಮಾಡಲಾಗದೇ ಲೆಗ್‌ಬೈಸ್ ಮಾಡಿಕೊಂಡು ಮತ್ತೆ ಪಾಂಡ್ಯ ಸಿಂಗಲ್ ತೆಗೆದುಕೊಂಡ ಕಾರಣ ಸ್ಟ್ರೈಕ್ ಪಡೆದ ಶೆಫರ್ಡ್ ಕ್ರಮವಾಗಿ ಡಾಟ್ ಬಾಲ್, ಬೌಂಡರಿ, ಎರಡು ಹಾಗೂ ಒಂದು ರನ್ ಗಳಿಸಿದರು. ಹೀಗೆ 15 ಎಸೆತಗಳಲ್ಲಿ ಕೇವಲ 23 ರನ್ ಬಾರಿಸಿದ ಶೆಫರ್ಡ್ ತಮಗಿದ್ದ ಚೇಸಿಂಗ್ ಜವಾಬ್ದಾರಿಯನ್ನು ನಿಭಾಯಿಸಲಾಗದೇ ಮಂಕಾದರು. ಪಂದ್ಯ ಮುಗಿಯುತ್ತಿದ್ದಂತೆ ಮೈದಾನದಲ್ಲೇ ಸಪ್ಪೆ ಮುಖ ಹಾಕಿ ಕುಳಿತರು. ಈ ವೇಳೆ ಲಕ್ನೋ ನಾಯಕ ಪಂತ್ ಬಂದು ಸಮಾಧಾನಪಡಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular