ಬೆಂಗಳೂರು: ತಂತ್ರಜ್ಞಾನಕ್ಕೆ ಹೆಸರಾದ ನಮ್ಮ ಬೆಂಗಳೂರು ಈಗ ಸೈಬರ್ ಅಪರಾಧಗಳಲ್ಲೂ ದೇಶದ ಇತರೆಲ್ಲಾ ಮಹಾನಗರಗಳನ್ನು ಹಿಂದಿಕ್ಕಿದೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿರುವ 2024ರ ಸಾಲಿನ ಅಂಕಿ-ಅಂಶಗಳ ಪ್ರಕಾರ, ಸೈಬರ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.
ದೇಶದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನದ್ದೇ ಸಿಂಹಪಾಲು
ವರದಿಯ ಪ್ರಕಾರ, 2024ರಲ್ಲಿ ದೇಶದ ಪ್ರಮುಖ ನಗರಗಳಲ್ಲಿ ದಾಖಲಾದ ಒಟ್ಟು 34,958 ಸೈಬರ್ ಪ್ರಕರಣಗಳ ಪೈಕಿ, ಅರ್ಧದಷ್ಟು ಅಂದರೆ 17,561 ಪ್ರಕರಣಗಳು ಕೇವಲ ಬೆಂಗಳೂರು ನಗರ ಒಂದರಲ್ಲೇ ವರದಿಯಾಗಿವೆ
ಯಾವ ನಗರದಲ್ಲಿ ಎಷ್ಟು ಕೇಸ್?
ಬೆಂಗಳೂರು: 17,561
ಮುಂಬೈ: 4,939
ಹೈದರಾಬಾದ್: 4,009
ಚೆನ್ನೈ: 1,882
ದೆಹಲಿ: 404
ರಾಜ್ಯದ ಮುಕ್ಕಾಲು ಭಾಗ ಬೆಂಗಳೂರಿನಲ್ಲೇ
ಕರ್ನಾಟಕ ರಾಜ್ಯಾದ್ಯಂತ 2024ರಲ್ಲಿ ಒಟ್ಟು 21,993 ಸೈಬರ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರಿನ ಪಾಲು ಅತಿ ಹೆಚ್ಚಿದೆ. ವಿಶೇಷವೆಂದರೆ, ನಗರದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಇನ್ನೂ 13,929 ಪ್ರಕರಣಗಳು ತನಿಖೆಯ ಹಂತದಲ್ಲಿದ್ದು, ಬಾಕಿ ಉಳಿದಿವೆ.
ಪೊಲೀಸರ ಸಮರ್ಥನೆ ಏನು?
ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗಲು ವಂಚನೆ ಹೆಚ್ಚಾಗಿರುವುದು ಮಾತ್ರ ಕಾರಣವಲ್ಲ, ಬದಲಾಗಿ ಜನರ ಜಾಗೃತಿಯೂ ಕಾರಣ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ವಿಶೇಷ ಠಾಣೆಗಳು: ಬೆಂಗಳೂರಿನಲ್ಲಿ 11 ವಿಶೇಷ ಸೈಬರ್ ಪೊಲೀಸ್ ಠಾಣೆಗಳಿರುವುದು ಮತ್ತು ಆನ್ಲೈನ್ ಮೂಲಕ ಸುಲಭವಾಗಿ ದೂರು ನೀಡುವ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಚ್ಚರಿಕೆ:
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧಗಳು ಕಂಪ್ಯೂಟರ್ ಮತ್ತು ತಂತ್ರಜ್ಞಾನ ಆಧಾರಿತವಾಗಿವೆ.
ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ.
ವೈಯಕ್ತಿಕ ಮಾಹಿತಿ ಮತ್ತು OTP ಯಾರೊಂದಿಗೂ ಹಂಚಿಕೊಳ್ಳಬೇಡಿ.
ವಂಚನೆಗೊಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ.

