ತೆಲಂಗಾಣ: ತೆಲಂಗಾಣದ ಬಿಆರ್ ಎಸ್ ಪಕ್ಷದ ಕ್ಯಾಂಪ್ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ, ಪೀಠೋಪಕರಣಗಳನ್ನು ದ್ವಂಸಗೊಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಿಜೆಪಿ ಸಂಸದ, ಕೇಂದ್ರ ಸಚಿವ ಬಂಡಿ ಸಂಜಯ್ ಡ್ರಗ್ಸ್ ಸೇವಿಸುತ್ತಾರೆ. ಅವರು ಡ್ರಗ್ಸ್ ಟೆಸ್ಟ್ ಗೆ ಒಳಗಾಗಲಿ ಎಂದಿದ್ದ ಬಿಆರ್ ಎಸ್ ಶಾಸಕ ಕೌಶಿಕ್ ರೆಡ್ಡಿ ಹೇಳಿಕೆ ಖಂಡಿಸಿ ಬಿಜೆಪಿ ಶಾಸಕರು ಈ ದಾಳಿ ನಡೆಸಿದ್ದಾರೆ.
ಶಾಸಕ ಕೌಶಿಕ್ ರೆಡ್ಡಿ ಕರೀಂ ನಗರದಲ್ಲಿರುವ ಶಾಸಕ ಗಂಗುಲ ಕಮಲಾಕರ್ ಅವರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಪೀಠೋಪಕರಣಗಳನ್ನು ಧ್ವಂಸಗೊಳೀಸಿ ಕೌಶಿಕ್ ರೆಡ್ಡಿ ವಿರುದ್ಧ ಘೋಷಣೆ ಕೂಗಿದ್ದಾರೆ.
ಅಲ್ಲದೇ ಪಕ್ಷದ ಕಚೇರಿ ಮುಂದೆ ನಿಂತಿದ್ದ ವಾಹನಗಳನ್ನು ಹಾಗೂ ಕೌಶಿಕ್ ರೆಡ್ಡಿ ಕಾರಿನ ಗಾಜುಗಳನ್ನು ಒಡೆದು, ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪೊಲೀಸರ ಏಟಿಗೆ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ್ದಾರೆ. ಬಿಆರ್ ಎಸ್ ಪಕ್ಷದ ಕಚೇರಿ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

