HomeKarnatakaಜೀವ, ಬೆಳೆ ಹಾನಿ ತಡೆಗೆ ಆಯ್ದ ಪ್ರದೇಶದಲ್ಲಿ ವನ್ಯಜೀವಿಗಳ ಸಂತಾನ ನಿಯಂತ್ರಣಕ್ಕೆ ಚಿಂತನೆ  

ಜೀವ, ಬೆಳೆ ಹಾನಿ ತಡೆಗೆ ಆಯ್ದ ಪ್ರದೇಶದಲ್ಲಿ ವನ್ಯಜೀವಿಗಳ ಸಂತಾನ ನಿಯಂತ್ರಣಕ್ಕೆ ಚಿಂತನೆ  

ಮಡಿಕೇರಿ: ವನ್ಯಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರ ಅಮೂಲ್ಯ ಜೀವ, ಬೆಳೆ ಹಾನಿ ತಪ್ಪಿಸಲು ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಸಲಹೆಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕವಾಗಿ ತಜ್ಞರ ಮಟ್ಟದಲ್ಲಿ ಚರ್ಚೆ ಆಗುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೇಳಿದ್ದಾರೆ.

ದುಬಾರೆಯಲ್ಲಿ 7.3 ಕೋಟಿ ರೂ. ವೆಚ್ಚದ ತೂಗು ಸೇತುವೆ ಮತ್ತು ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನೂತನ ವಾಹನಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ಅವರು ವರದಿ ನೀಡಿದ್ದಾರೆ. ಕಾಡಂಚಿನ ಜನರು ಕೂಡ ಈ ಬಗ್ಗೆ ಸಲಹೆ ನೀಡಬೇಕು ಎಂದರು.

ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಇಲ್ಲ. ಅನುದಾನದ ಕೊರತೆ ಇಲ್ಲ. ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಆದಷ್ಟು ಶೀಘ್ರ ಹೆಚ್ಚಿನ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಣ್ಯವಾಸಿಗಳು ಮತ್ತು ಅರಣ್ಯದಂಚಿನ ಜನರು ದೀರ್ಘ ಕಾಲದಿಂದ ಅರಣ್ಯವನ್ನು ಸಂರಕ್ಷಿಸಿದ್ದಾರೆ. ಆದರೆ ಇಂದು ಮಾನವ-ವನ್ಯಜೀವಿ ಸಂಘರ್ಷದಿಂದ ಅಮೂಲ್ಯ ಜೀವಹಾನಿ ಆಗುತ್ತಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳು ಜನರ ಜೀವ ಉಳಿಸಲು ಪ್ರಥಮ ಆದ್ಯತೆ ನೀಡಬೇಕು ಎಂದರು.

ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ದುಬಾರೆ ಹಾಡಿಯಲ್ಲಿರುವ 150 ಮನೆಗಳ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ನಗರಕ್ಕೆ ಬರಲು ಅನುಕೂಲವಾಗುವಂತೆ 7.3 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ತೂಗು ಸೇತುವೆ ನಿರ್ಮಿಸಲಾಗುತ್ತಿದೆ. ಈ ಮೂಲಕ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದರು.

 ಕೊಡಗು ಜಿಲ್ಲೆ ಜಗತ್ತಿನ ಜೀವವೈವಿಧ್ಯತೆಯ ತಾಣ ಹಾಗೂ ಹಲವು ನದಿಗಳ ಮೂಲವಾದ ಪಶ್ಚಿಮಘಟ್ಟವನ್ನು ಒಳಗೊಂಡ ಸುಂದರ ಪ್ರದೇಶ. ಇಲ್ಲಿ ನೂರಾರು ಪ್ರಭೇದದ ಸಸ್ಯಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಇದ್ದು, ನೀವೆಲ್ಲರೂ ಇಂತಹ ಸುಂದರ ಪರಿಸರದಲ್ಲಿದ್ದೀರಿ. ನಿಜಕ್ಕೂ ನೀವೆಲ್ಲ ಅದೃಷ್ಟವಂತರು ಎಂದರು.

ಇಂದು ನಾವು ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದ್ದೇವೆ. ಬೆಂಗಳೂರು ನಿವೃತ್ತರ ಸ್ವರ್ಗವಾಗಿತ್ತು. ಆದರೆ ಇಂದು ತಾಪಮಾನ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಳವಾಗುತ್ತಿದೆ. ಇದೆಲ್ಲ ಕಾಡು ನಾಶದ ಪರಿಣಾಮವಾಗಿದೆ. ಹೀಗಾಗಿ ಅರಣ್ಯ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದರು.

ಇಂದಿರಾಗಾಂಧಿ ಅವರು ಪ್ರಧಾನಮಂತ್ರಿಗಳಾಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಪರಿಣಾಮವಾಗಿ ಕಾಡು, ವನ್ಯಜೀವಿ ಉಳಿದಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಮಹತ್ವದ್ದಾಗಿದ್ದು, ಕಾಡಿನಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂದು ತಿಳಿಸಿದರು.

ಅರಣ್ಯ ಇಲಾಖೆ ಆನೆಗಳ ಚಲನವಲನದ ಬಗ್ಗೆ ನಿಗಾ ಇಡಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದೆ. ನವೆಂಬರ್, ಡಿಸೆಂಬರ್ ಜನವರಿಯಲ್ಲಿ ಆನೆಗಳು ಕಾಡಿನಿಂದ ಹೊರಬರುತ್ತವೆ. ಆಗ ಸಂಘರ್ಷ ಹೆಚ್ಚಾಗುತ್ತದೆ, ಕಾರಣ ಆನೆಗಳು ತೆನೆ ತಿನ್ನಲು ಬರುತ್ತವೆ. ತೋಟದ ಮಾಲೀಕರು, ಜಮೀನು ಮಾಲೀಕರು ಕೂಡ ಆನೆಗಳ ವಿಚಾರದಲ್ಲಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದರು. 

ದುಬಾರೆ ಆನೆ ಶಿಬಿರಕ್ಕೆ 100 ವರ್ಷಗಳ ಇತಿಹಾಸವಿದೆ. ಇಲ್ಲಿ 15 ಕುಮ್ಕಿ ಆನೆಗಳಿದ್ದು, ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿವೆ. ವಿವಿಧ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿವೆ. ಆನೆಗಳಿಗೆ ಪೂಜ್ಯ ಸ್ಥಾನ ಇದೆ. ಹೀಗಾಗಿ ನಾವು ವನ್ಯಜೀವಿಗಳ ಸಂರಕ್ಷಣೆಗೂ ಮುಂದಾಗಬೇಕು ಎಂದರು.

ಕಾಡಿನಂಚಿನ ಜನರೊಂದಿಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಕಾನೂನು ಪಾಲಿಸಿ, ಜನರಿಗೆ ಅರಿವು ಮೂಡಿಸಬೇಕು ಎಂದು ಕಿವಿ ಮಾತು ಹೇಳಿದರು.

ಅರಣ್ಯದಂಚಿನ ಜನರಿಗೆ ಅನುಕೂಲವಾಗುವಂತೆ ಹಲವು ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಅವರ ಜೀವನೋಪಾಯಕ್ಕೆ ನೆರವಾಗುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಶಾಲೆಗಳ ಅಭಿವೃದ್ಧಿಗೂ ಶ್ರಮಿಸುತ್ತಿದ್ದೇವೆ ಎಂದರು.

ಸೆಕ್ಷನ್ 4, ಡೀಮ್ಡ್ ಅರಣ್ಯ ಮೊದಲಾದ ವಿಚಾರಗಳ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದು, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಅವರು, ಇಂದು ಯಸಳೂರಿನಲ್ಲಿ ಅರ್ಜುನ ಆನೆಯ ಸ್ಮಾರಕ ಉದ್ಘಾಟನೆಗೆ ತೆರಳುತ್ತಿರುವುದಾಗಿ ತಿಳಿಸಿದರು.

ಶಾಸಕ ಡಾ. ಮಂತರ್ ಗೌಡ ಅವರು ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಈಶ್ವರ ಖಂಡ್ರೆ ತಂದಿದ್ದಾರೆ. ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ತೋಟದ ಆನೆಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕು, ಬೆಳೆ ಹಾನಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಜನಸಂಪರ್ಕ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ, ಕಾಡಿನಂಚಿನ ಗ್ರಾಮದ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು.

 ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.

ಇನ್ನಷ್ಟು ಮಾಹಿತಿ:

ದುಬಾರೆಯ ಕಾವೇರಿ ಹೊಳೆಯಲ್ಲಿ ನಿರ್ಮಿಸಲಾಗುವ ಸುಮಾರು 7.3 ಕೋಟಿ ರೂ ವೆಚ್ಚದ ‘ತೂಗು ಸೇತುವೆ’ ನಿರ್ಮಾಣಕ್ಕೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕು, ಕುಶಾಲನಗರ ವಲಯದ ನಂಜರಾಯಪಟ್ಟಣ ಗ್ರಾಮದ ದುಬಾರೆಯಲ್ಲಿ ಕಾವೇರಿ ನದಿಗೆ ತೂಗು ಸೇತುವೆಯನ್ನು ನಿರ್ಮಿಸುತ್ತಿದ್ದು ಈ ಯೋಜನೆಯು ದುಬಾರೆ ಹಾಡಿಯಲ್ಲಿ ವಾಸಿಸುತ್ತಿರುವ 150 ಕ್ಕೂ ಹೆಚ್ಚು ಕುಟುಂಬಗಳ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದು ತುರ್ತು ಸಂದರ್ಭದಲ್ಲಿ ದುಬಾರೆ ಹಾಡಿ ಜನಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಹೊಳೆ ದಾಟುವ ಪರಿಸ್ಥಿತಿ ಇನ್ನು ಅಥವಾ ದುಬಾರೆ ಮಾಲ್ದಾರೆ ಮಾರ್ಗವಾಗಿ ಮೀಸಲು ಅರಣ್ಯದ ಒಳಗಡೆ ಸುಮಾರು 10 ಕಿ.ಮೀ ಗಳು ತೆರಳಬೇಕಾಗಿರುವುದಿಂದ ಬಹಳ ಅನಾನುಕೂಲವಾಗುತ್ತಿತ್ತು. ಅಲ್ಲದೇ ಮಳೆಗಾಲದ ಸಂದರ್ಭದಲ್ಲಿ ಶಿಬಿರಕ್ಕೆ, ಬರುವ ಪ್ರವಾಸಿಗರಿಗೂ ಸಹ ಅನಾನುಕೂಲವಾಗುತ್ತಿತ್ತು.

ತೂಗು ಸೇತುವೆ ನಿರ್ಮಾಣದಿಂದ ದುಬಾರೆ ಹಾಡಿಯ 150 ಕ್ಕೂ ಹೆಚ್ಚು ಕುಟುಂಬದ ಜನರಿಗೂ, ಸಾಕಾನೆ ಶಿಬಿರದ ಸಿಬ್ಬಂದಿಗಳಿಗೂ ಮತ್ತು ಪ್ರವಾಸಿಗರಿಗೂ ಹೆಚ್ಚು ಅನುಕೂಲವಾಗುತ್ತದೆ.

ವಸತಿ ಸಮುಚ್ಚಯದ ವಿವರ: 2025-26ನೇ ಸಾಲಿನಲ್ಲಿ ಕುಶಾಲನಗರ ವಲಯದ ಉಪ ವಲಯ ಅರಣ್ಯಾಧಿಕಾರಿಗಳಿಗಾಗಿ ಕಾಂಪಾ ಯೋಜನೆಯಡಿಯಲ್ಲಿ ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ನಾಟ ಸಂಗ್ರಹಾಲಯದ ಆವರಣದಲ್ಲಿ ಹೊಸದಾಗಿ 90 ಲಕ್ಷ ರೂ. ವೆಚ್ಚದಲ್ಲಿ 4 ಸಂಖ್ಯೆ ವಸತಿ ಗೃಹಗಳನ್ನು ನಿರ್ಮಿಸಲಾಗಿರುತ್ತದೆ.

ಹೊಸದಾಗಿ ಖರೀದಿಸಿರುವ ವಾಹನಗಳ ವಿವರ : ಮಡಿಕೇರಿ ವಿಭಾಗದ ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರಕ್ಕೆ ಹೊಸದಾಗಿ ಕೊಡಗು ಫೌಂಡೇಷನ್ ಯೋಜನೆಯಡಿಯಲ್ಲಿ 29 ಲಕ್ಷ ರೂ. ಗಳಿಗೆ ಅಶೋಕ್ ಲೆಲ್ಯಾಂಡ್ ಕಂಪೆನಿಯ 10 ಚಕ್ರದ 01 ಲಾರಿಯನ್ನು ಖರೀದಿಸಲಾಗಿರುತ್ತದೆ.

ಮಡಿಕೇರಿ ವಿಭಾಗಕ್ಕೆ ಕೊಡಗು ಫೌಂಡೇಷನ್ ಯೋಜನೆಯಡಿಯಲ್ಲಿ ಮಾನವ ಪ್ರಾಣಿ ಸಂಘರ್ಷ ನಿಯಂತ್ರಿಸಲು 37.20 ಲಕ್ಷ ರೂ ಗಳಿಗೆ 04 ಸಂಖ್ಯೆ ಬೊಲೇರೋ ಕ್ಯಾಂಪರ್ ವಾಹನವನ್ನು ಖರೀದಿಸಲಾಗಿರುತ್ತದೆ.

ಜೇನುಪೆಟ್ಟಿಗೆ, ಹೊಲಿಗೆ ಯಂತ್ರ ಹಾಗೂ ಸರ್ಕಾರಿ ಶಾಲೆಗಳಿಗೆ ಇಂಟರ್ ಆಕ್ಟಿವ್ ಪ್ಯಾನಲ್ ವಿತರಿಸುತ್ತಿರುವ ಒಟ್ಟು 04 ಜನ ರೈತರಿಗೆ 50400 ರೂ.ವೆಚ್ಚದಲ್ಲಿ ಹನಿ ಎಕ್ಸಾಟ್ರಾಕ್ಟರ್, ಒಬ್ಬ ರೈತರಿಗೆ ಜೇನು ಕೃಷಿ ಬಗ್ಗೆ ತರಬೇತಿ 25000, 30 ಜನ ಕಾಡಂಚಿನ ಗ್ರಾಮದ ಫಲಾನುಭವಿಗಳಿಗೆ ಜೇನುಪೆಟ್ಟಿಗೆ ವಿತರಣೆ 150000, 15 ಜನ ಕಾಡಂಚಿನ ಗ್ರಾಮದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ. ಚೆಟ್ನಳ್ಳಿ ಮತ್ತು ಚಿಕ್ಕತ್ತೂರು ಸರ್ಕಾರಿ ಶಾಲೆಗಳಿಗೆ ಇಂಟರ್ ಆಕ್ಟಿವ್ ಪ್ಯಾನಲ್ ವಿತರಿಸಲಾಗುತ್ತಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular