ನಿನ್ನೆ ( ಮೇ 4 ) ಘೋಷಣೆಯಾದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಪೈಕಿ ತಮಿಳುನಾಡು ಫಲಿತಾಂಶ ರಾಜಕಾರಣಿಗಳ ಪಾಲಿಗೆ ಅಚ್ಚರಿಯುತವಾಗಿತ್ತು ಎಂದರೆ ತಪ್ಪಾಗಲಾರದು.
ಬಲಿಷ್ಠ ಡಿಎಂಕೆ ಎದುರು ಎರಡು ವರ್ಷಗಳ ಹಿಂದಷ್ಟೇ ಸ್ಥಾಪನೆಯಾದ ಟಿವಿಕೆ 108 ಸೀಟುಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ಸ್ಥಾಪಿಸುವ ಮಟ್ಟಕ್ಕೆ ತಲುಪಲಿದೆ ಎಂದು ಯಾರೂ ಸಹ ಊಹಿಸಿರಲಿಲ್ಲ.
ಈ ಮಟ್ಟಕ್ಕೆ ಟಿವಿಕೆ ಗೆದ್ದು ಬೀಗಲು ಕಾರಣ ವಿಜಯ್ ಸ್ಟಾರ್‌ಡಮ್, ಟಿವಿಕೆ ಪಕ್ಷದಲ್ಲಿನ ಸಾಲು ಸಾಲು ಉಚಿತ ಭಾಗ್ಯಗಳ ಆಫರ್ ಹಾಗೂ ಪ್ರಶಾಂತ್ ಕಿಶೋರ್ ತಂತ್ರ. ಹೌದು, ಈ ಹಿಂದೆ ಇದೇ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್ ಈ ಬಾರಿ ಟಿವಿಕೆ ಪರ ಕೆಲಸ ಮಾಡಿದ್ದರು.
ಚುನಾವಣೆಗೂ ಮುನ್ನ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ವೇದಿಕೆಯನ್ನೇರಿ ಮಾತನಾಡಿದ್ದ ಇದೇ ಪ್ರಶಾಂತ್ ಕಿಶೋರ್ ತಮಿಳುನಾಡಿನ ರಾಜಕೀಯ ಭವಿಷ್ಯವನ್ನು ರಾಜಾರೋಷವಾಗಿ ನುಡಿದಿದ್ದರು. ಟಿವಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿದ್ದರು. ಅದರಂತೆ ಈಗ ಟಿವಿಕೆ ಅಧಿಕಾರಕ್ಕೇರಿದ್ದು, ಪ್ರಶಾಂತ್ ಕಿಶೋರ್ ಈ ಹಿಂದೆ ಮಾಡಿದ್ದ ಭಾಷಣದ ವಿಡಿಯೊ ಈಗ ವೈರಲ್ ಆಗಿದೆ.
2025ರ ಫೆಬ್ರವರಿ 26ರಂದು ಮಾತನಾಡಿದ್ದ ಪ್ರಶಾಂತ್ ಕಿಶೋರ್ ‘ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಟ್ರೋಫಿ ಗೆಲ್ಲಿಸಿದ ಬಿಹಾರಿ ಮಿಸ್ಟರ್ ಎಂಎಸ್ ಧೋನಿ ತಮಿಳುನಾಡಿನಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಸದ್ಯ ತಮಿಳುನಾಡಿನಲ್ಲಿ ನನಗಿಂತ ಆತನೇ ಫೇಮಸ್. ಇದೇ ಟಿವಿಕೆಯನ್ನು ಗೆಲ್ಲಿಸಿ ನಾನು ಆತನ ಜತೆ ಪೈಪೋಟಿ ಮಾಡಿ ಆತನಿಗಿಂತ ಫೇಮಸ್ ಆಗುತ್ತೇನೆ. ಮುಂದಿನ ವರ್ಷ ನಾನು ಟಿವಿಕೆಗೆ ಸಹಾಯ ಮಾಡಿ ಗೆಲ್ಲಿಸಿದ ಮೇಲೆ ಆತನಿಗಿಂತ ಹೆಚ್ಚು ಖ್ಯಾತಿಯನ್ನು ಪಡೆಯುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಮೂಲತಃ ಧೋನಿ ಜಾರ್ಖಂಡ್‌ನ ರಾಂಚಿಯವರಾಗಿದ್ದು, ಈ ಹಿಂದೆ ಇದೇ ರಾಂಚಿ ಜಾರ್ಖಂಡ್ ರಾಜ್ಯ ಸ್ಥಾಪನೆಗೊಳ್ಳುವ ಮುನ್ನ ಬಿಹಾರಕ್ಕೆ ಸೇರಿತ್ತು. ಹೀಗಾಗಿ ಪ್ರಶಾಂತ್ ಕಿಶೋರ್ ಧೋನಿಯನ್ನು ಬಿಹಾರಿ ಎಂದು ಪರಿಗಣಿಸಿದ್ದಾರೆ.

