ಅಸ್ಸಾಂನ 2026 ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಏಪ್ರಿಲ್ 9 ರಂದು ನಡೆದ ಮತದಾನದಲ್ಲಿ 2.50 ಕೋಟಿಗೂ ಹೆಚ್ಚು ಮತದಾರರಲ್ಲಿ ಶೇಕಡಾ 85.96 ರಷ್ಟು ಜನರು ಮತ ಚಲಾಯಿಸಿದ್ದು, ರಾಜ್ಯದ 126 ಕ್ಷೇತ್ರಗಳ 722 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದ್ದಾರೆ.
ಅಸ್ಸಾಂನ ಎಲ್ಲಾ 35 ಜಿಲ್ಲೆಗಳ 40 ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಇಂದು ಬೆಳಗ್ಗೆ 8 ಗಂಟೆಗೆ ಇವಿಎಂಗಳನ್ನು (EVM) ತೆರೆಯಲಾಗಿದೆ. ಈ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ (NDA) ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಆಡಳಿತಾರೂಢ ಮೈತ್ರಿಕೂಟದಿಂದ ಅಧಿಕಾರವನ್ನು ಕಸಿದುಕೊಳ್ಳುವ ಭರವಸೆಯಲ್ಲಿದೆ.
ಅಸ್ಸಾಂ ಚುನಾವಣಾ ಫಲಿತಾಂಶ 2026: ಅಸ್ಸಾಂನಾದ್ಯಂತ ಮತ ಎಣಿಕೆ ಆರಂಭ, 722 ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗ ಅಸ್ಸಾಂನಲ್ಲಿ 2026 ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ರಾಜ್ಯದಾದ್ಯಂತ ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಸ್ಸಾಂನ ಜೋರ್ಹತ್ನಲ್ಲಿರುವ ಮತ ಎಣಿಕೆ ಕೇಂದ್ರದ ಹೊರಗಿನ ದೃಶ್ಯಗಳು. 2026 ರ ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೋರ್ಹತ್, ಮರಿಯಾನಿ ಮತ್ತು ಟಿತಾಬೋರ್ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಇಲ್ಲಿ ಆರಂಭವಾಗಲಿದೆ.
ಮತ ಎಣಿಕೆ ಆರಂಭವಾಗುವ ಮುನ್ನ ಗುವಾಹಟಿಯ ಮಣಿರಾಮ್ ದಿವಾನ್ ಟ್ರೇಡ್ ಸೆಂಟರ್ನಲ್ಲಿರುವ ಕಾಮ್ರೂಪ್ (ಮೆಟ್ರೋ) ಜಿಲ್ಲೆಯ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಮ್ಗೆ ವಿವಿಧ ರಾಜಕೀಯ ಪಕ್ಷಗಳ ಎಣಿಕೆ ಏಜೆಂಟರು ಆಗಮಿಸುತ್ತಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ದಿಸ್ಪುರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಅಸ್ಸಾಂನ ದಿಸ್ಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರದ್ಯುತ್ ಬೊರ್ಡೊಲೊಯ್ ಅವರು ಮತ ಎಣಿಕೆಯ ದಿನದಂದು ತಮ್ಮ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಮತಗಳ ಎಣಿಕೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅಸ್ಸಾಂನಾದ್ಯಂತ ಜನರು ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎಗೆ ಅಗಾಧವಾಗಿ ಮತ ಹಾಕಿದ್ದಾರೆ ಎಂಬುದನ್ನು ನೀವು ಅನುಭವಿಸಬಹುದು. ಇವತ್ತು ಸಂಜೆಯ ವೇಳೆಗೆ ಅಸ್ಸಾಂನ ಜನರು ಸತತವಾಗಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲು ಮತ್ತು ಹಿಮಂತ ಬಿಸ್ವ ಶರ್ಮಾ ಅವರು ಮತ್ತೆ ಮುಖ್ಯಮಂತ್ರಿಯಾಗಲು ಭರ್ಜರಿ ಜನಾದೇಶವನ್ನು ನೀಡಲಿದ್ದಾರೆ ಎಂಬ ನಂಬಿಕೆ ನನಗಿದೆ,” ಎಂದು ಸುದ್ಧಿ ಸಂಸ್ಥೆ ಎಎನ್ಐ (ANI) ಎಕ್ಸ್ನಲ್ಲಿ ಹಂಚಿಕೊಂಡಿರುವ ಬೈಟ್ನಲ್ಲಿ ಅವರು ತಿಳಿಸಿದ್ದಾರೆ.

