ಬೆಂಗಳೂರು: ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ನಡೆಸುವ ನೀಟ್ ಪರೀಕ್ಷೆ ಭಾನುವಾರ ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ನಡೆದಿದೆ ಎಂದು ಹೇಳಲಾಗಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 50,000ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2026- 27 ನೇ ಸಾಲಿಗೆ ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು 13000 ಸೀಟುಗಳು ಲಭ್ಯವಿದ್ದು, ಇದು ದೇಶದಲ್ಲೇ ಅತ್ಯಧಿಕವಾಗಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಪರೀಕ್ಷೆಗೆ 10 ನಿಮಿಷ ತಡವಾಗಿ ಬಂದ ಇಬ್ಬರೂ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆದಿದ್ದು, ನಿಯಮಾನಸಾರ ಮಧ್ಯಾಹ್ನ 1:30 ಕ್ಕೆ ಪರೀಕ್ಷಾ ಕೇಂದ್ರದ ಗೇಟ್ ಗಳನ್ನು ಬಂದ್ ಮಾಡಲಾಗಿತ್ತು.

