ಜಬಲ್ಪುರ: ಬಾರ್ಗಿ ಅಣೆಕಟ್ಟೆ ಬಳಿ ನರ್ಮದಾ ನಡಿಯಲ್ಲಿ ಪ್ರವಾಸಿಗರ ಬೋಟ್ ಮುಳುಗಿ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಈವರೆಗೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಬಾರ್ಗಿ ಬ್ರಿಡ್ಜ್ ಬಳಿ ಎರಡು ದಿನಗಳ ಹಿಂದೆ ಈ ದುರಂತ ಸಂಭವಿಸಿತ್ತು. ಭಾರ್ ಬಿರುಗಾಳಿಗೆ ಪ್ರವಾಸಿಗರ ಕ್ರೂಸ್ ದೋಣಿ ಮಗುಚಿ ಬಿದ್ದ ಪರಿಣಾಮ ಹಲವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ.
ನರ್ಮದಾ ನದಿಯಲ್ಲಿ ಘಟನಾ ಸ್ಥಳದಲ್ಲಿ ನಾಪತ್ತೆಯಾಗಿದ್ದವರ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಎರಡು ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಖಮರಿಯಾದ ಆರ್ಡನೆನ್ಸ್ ಫ್ಯಾಕ್ಟರಿಯ ಉದ್ಯೋಗಿಯ ಮಗ ಮಯೂರಾಮ್ ಮತ್ತು ಆತನ ಚಿಕ್ಕಪ್ಪ 50 ವರ್ಷದ ಕಾಮರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಇವರಿಗಾಗಿ ಕುಟುಂಬಸ್ಥರು ಹಾಗೂ ರಕ್ಷಣಾ ಪಡೆಗಳು ಹುಡುಕಾಡುತ್ತಿದ್ದವು, ಆದರೆ ಇಂದು ಬೆಳಗ್ಗೆ ಅಣೆಕಟ್ಟಿನಿಂದ ಇಬ್ಬರ ಮೃತದೇಹ ಹೊರತೆಗೆಯಲಾಗಿದೆ.
ಗುರುವಾರ ಸಂಜೆ ಪ್ರವಾಸಿಗರು ಕ್ರೂಸ್ ದೋಣಿಯಲ್ಲಿ ನರ್ಮದಾ ನದಿಯಲ್ಲಿ ವಿಹಾರಕ್ಕೆ ತೆರಳಿದ್ದಾಗ ಏಕಾಏಕಿ ಹವಾಮಾನ ವೈಪರೀತ್ಯ ಉಂಟಾಗಿತ್ತು. ಬಿರುಗಾಳಿಹೊಡೆತಕ್ಕೆ ಸಿಲುಕಿ ದೋಣಿ ಅಸಮತೋಲನಗೊಂಡು ನೀರಿನಲ್ಲಿ ಮುಳುಗಿತ್ತು. ಹಲವರು ಜಲಸಮಾಧಿಯಾಗಿದ್ದರು. ಕೆಲವರು ನಾಪತ್ತೆಯಾಗಿದ್ದರು. ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ನದಿಯ ಆಳ ಮತ್ತು ಹೂಳಿನ ಕಾರಣದಿಂದಾಗಿ ಶೋಧ ಕಾರ್ಯ ಸವಾಲಿನಿಂದ ಕೂಡಿದೆ. ಆದರೂ ನಿರಂತರ ಪ್ರಯತ್ನದ ಫಲವಾಗಿ ನಾಪತ್ತೆಯಾದವರ ದೇಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

