ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ರೋಚಕ ಹಂತ ತಲುಪಿದ್ದು, ಟಾಪ್ 4 ಸ್ಥಾನಕ್ಕಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಲೀಗ್ ಹಂತದಲ್ಲಿ 43 ಪಂದ್ಯಗಳು ಮುಗಿದರೂ ಸಹ ಇನ್ನೂ ಪ್ಲೇಆಫ್ ರೇಸ್‌ಗೆ ಇಳಿದ ತಂಡ ಎನಿಸಿಕೊಂಡಿಲ್ಲ. ಇಲ್ಲಿಯವರೆಗೂ ಆಡಿರುವ 8 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆದ್ದು ಉಳಿದ ಐದು ಪಂದ್ಯಗಳಲ್ಲಿ ಸೋತಿರುವ ಚೆನ್ನೈ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಒಂದೆಡೆ ತಮ್ಮ ನೆಚ್ಚಿನ ತಂಡ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ ಎಂಬ ಕೊರಗು ಅಭಿಮಾನಿಗಳನ್ನು ಕಾಡುತ್ತಿದ್ದರೆ ಮತ್ತೊಂದೆಡೆ ತಮ್ಮ ನೆಚ್ಚಿನ ಆಟಗಾರ ಎಂಎಸ್ ಧೋನಿ ಇಲ್ಲಿಯವರೆಗೂ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ ಎಂಬ ಬೇಸರ ಮನೆ ಮಾಡಿದೆ.
ಹೌದು, ಆರಂಭದಲ್ಲಿ ಕಾಲಿನ ಗಾಯದಿಂದ ಧೋನಿ ಕೆಲ ಪಂದ್ಯಗಳಿಗೆ ಅಲಭ್ಯ ಎಂದು ಹೇಳಲಾಗಿತ್ತು. ಆದರೆ ಟೂರ್ನಿ ಆರಂಭವಾಗಿ ತಿಂಗಳು ಸಮೀಪಿಸುತ್ತಿದ್ದರೂ ಇನ್ನೂ ಧೋನಿ ಮರಳುವ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಧೋನಿ ಯಾಕೆ ಕಣಕ್ಕಿಳಿಯುತ್ತಿಲ್ಲ ಎಂಬುದಕ್ಕೆ ವಿಭಿನ್ನವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
‘ಆತ ಪಂದ್ಯವನ್ನಾಡಲು ಬರುತ್ತಿಲ್ಲ. ಆತನೊಬ್ಬ ತಂಡಕ್ಕೆ ಪ್ರಾಶಸ್ತ್ಯ ನೀಡುವ ಆಟಗಾರ. ಆತ ಯಾವಾಗಲೂ ತಂಡಕ್ಕೆ ಉತ್ತಮವಾದದ್ದೇ ನಡೆಯಲಿ ಎಂದು ಆಶಿಸುವ ವ್ಯಕ್ತಿ. ಆತ ತಾನು ಪಂದ್ಯವನ್ನಾಡಿದರೆ ಎಲ್ಲಿ ಗಮನ ಬದಲಾಗಿಬಿಡುತ್ತದೋ ಎಂಬ ಯೋಚನೆಯಲ್ಲಿದ್ದಾನೆ. ಕ್ಯಾಮೆರಾಗಳು ಆತನನ್ನೇ ಹಿಂಬಾಲಿಸುವುದು ಹಾಗೂ ಅಭಿಮಾನಿಗಳು ಆತನಿಗಾಗಿ ಕೂಗುವುದು ನಡೆಯುತ್ತವೆ. ಹೀಗಾಗಿ ತಂಡ ಇದನ್ನೆಲ್ಲ ಎದುರಿಸದೇ ಆಟವನ್ನಾಡಲಿ ಎಂಬುದು ಆತನ ಉದ್ದೇಶ. ಅದು ತಪ್ಪೋ ಸರಿಯೋ ಎಂಬುದು ನನಗೆ ಗೊತ್ತಿಲ್ಲ, ಆದರೆ ಅದು ಧೋನಿಯ ನಿರ್ಧಾರ. ನಾನು ವೈಯಕ್ತಿಕವಾಗಿ ಆತ ಡ್ರೆಸಿಂಗ್ ರೂಮ್‌ನಲ್ಲಿ ಇರಲಿ ಎಂದು ಆಶಿಸುತ್ತೇನೆ, ಆತನಲ್ಲಿ ಅಪಾರ ಜ್ಞಾನಭಂಡಾರವಿದೆ. ಆತನಿಂದ ಇತರೆ ಆಟಗಾರರಿಗೆ ವಿಶ್ವಾಸ ಬರುತ್ತದೆ’ ಎಂದು ಮೈಕೆಲ್ ಹಸ್ಸಿ ತಿಳಿಸಿದ್ದಾರೆ.
ಈ ಮೂಲಕ ಅಭಿಮಾನಿಗಳು ಅತಿಯಾಗಿ ತನ್ನನ್ನು ಆರಾಧಿಸಿ ಹೆಸರನ್ನು ಕೂಗಿ ಪಂದ್ಯಕ್ಕಿಂತ ಹೆಚ್ಚಾಗಿ ತನ್ನ ಮೇಲೆ ಗಮನ ಬೀಳುವ ಕಾರಣ ಧೋನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಮೈಕೆಲ್ ಹಸ್ಸಿ ಇದಕ್ಕೆಲ್ಲ ಆತನ ಅಭಿಮಾನಿಗಳೇ ಕಾರಣ ಎಂದು ತಿಳಿಸಿದ್ದಾರೆ.

