ಇಂದು ( ಏಪ್ರಿಲ್ 30 ) ನಿರ್ದೇಶಕ ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕೆಡಿ ದಿ ಡೆವಿಲ್ ಬೆಳ್ಳಿ ತೆರೆಗೆ ಅಪ್ಪಳಿಸಿದೆ.
ಇದೇ ಮೊದಲ ಬಾರಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಿರುವ ಪ್ರೇಮ್ ಚಿತ್ರದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಬಹು ದೊಡ್ಡ ತಾರಾಗಣವೇ ಇದ್ದು, ಹಿರಿಯ ಕಲಾವಿದರಾದ ವಿ ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಹಾಗೂ ಸಂಜತ್ ದತ್ ನಟಿಸಿದ್ದಾರೆ. ಜತೆಗೆ ಕಿಚ್ಚ ಸುದೀಪ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದು , ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಗುರುವೇ ನಿನ್ನಾಟ ಬಲ್ಲವರಾರರೋ ಹಾಡಿನ ಮೂಲಕ ತಮ್ಮ ಹಳೆಯ ಚಿತ್ರಗಳ ಹಾಗೆ ಹಾಡಿನ ಮೂಲಕ ಚಿತ್ರದತ್ತ ಗಮನ ಸೆಳೆಯಲು ಬೇಕಿದ್ದ ಕೆಲಸ ಮಾಡಿದ್ದ ಪ್ರೇಮ್ ನಂತರದ ಹಾಡುಗಳಲ್ಲಿ ಆ ಕೆಲಸ ಮಾಡುವಲ್ಲಿ ಯಶಸ್ವಿಯಾಗಿರಲಿಲ್ಲ ಹಾಗೂ ಈ ಹಿಂದಿನ ಪ್ರೇಮ್ ಚಿತ್ರಗಳ ಹಾಗೆ ಕೆಡಿ ಚಿತ್ರಕ್ಕೆ ಅಬ್ಬರದ ಪ್ರಚಾರವೂ ಇರಲಿಲ್ಲ.
ಚಿತ್ರದ ಟ್ರೈಲರ್ ಸಹ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಟ್ರೈಲರ್ ವೀಕ್ಷಿಸಿದವರು ಚಿತ್ರ ಅಷ್ಟೇನೂ ಕೆಲಸ ಮಾಡುವುದಿಲ್ಲ ಎನಿಸುತ್ತದೆ ಎಂದಿದ್ದರು. ಆದರೆ ಇಂದು ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಹೌದು, ಮೊದಲ ಪ್ರದರ್ಶನ ವೀಕ್ಷಿಸಿ ಹೊರಬಂದಿ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹೇಗಿದೆ ಎಂಬುದನ್ನು ಬರೆದುಕೊಂಡಿದ್ದು, ಬಹುತೇಕ ವಿಮರ್ಶೆಗಳು ಪಾಸಿಟಿವ್ ಆಗಿವೆ.
ಪ್ರಶಾಂತ್ ಎಂಬುವರು ಕೆಡಿ ಚಿತ್ರ ವೀಕ್ಷಿಸಿ ಅದರ ಬಗ್ಗೆ ಬರೆದುಕೊಂಡಿದ್ದು, ಕೆಡಿ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್ ಇಬ್ಬರಿಗೂ ಸಹ ಕಮ್ಬ್ಯಾಕ್ ಸಿನಿಮಾವಾಗಿದೆ, ಮೊದಲಾರ್ಧದಲ್ಲಿ ಕಾಮಿಡಿ ಚೆನ್ನಾಗಿ ಕೆಲಸ ಮಾಡಿದೆ, ದ್ವಿತಿಯಾರ್ಧ ಪೈಸಾ ವಸೂಲ್, ನಟನೆ, ನಿರ್ದೇಶನ ಎಲ್ಲವೂ ಪರ್ಫೆಕ್ಟ್ ಅಗಿದೆ ಎಂದಿದ್ದಾರೆ. ಕ್ಲೈಮ್ಯಾಕ್ಸ್ ಹಾಗೂ ಕ್ಲೈಮ್ಯಾಕ್ಸ್ ನಂತರದ ಟ್ವಿಸ್ಟ್ ಚಿತ್ರವನ್ನು ಒಳ್ಳೆಯ ಹೈಪ್ ಜತೆಗೆ ಮುಗಿಸಿದೆ ಎಂದು ಹೊಗಳಿದ್ದಾರೆ.
ನಿತಿ ಎಂಬುವರು ಯಾವುದೇ ನಿರೀಕ್ಷೆಯಿಲ್ಲದ ಹೋದ ನನಗೆ ಚಿತ್ರ ಇಷ್ಟವಾಯಿತು. ಅತಿಯಾದ ಶಬ್ದವನ್ನುಂಟುಮಾಡುವ ಲವ್ ಟ್ರ್ಯಾಕ್ ತುಸು ಕಡಿಮೆ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಪೃಥ್ವಿ ಎಂಬುವರು ಶೋ ಮ್ಯಾನ್ ಈಸ್ ಬ್ಯಾಕ್, ಮಾಸ್ ಮೀಲ್ಸ್, ಕನ್ನಡದಲ್ಲಿ ಈ ಥರ ಒಂದು ಮಾಸ್ ಎಂಟರ್ಟೈನರ್ ನೋಡಿ ತುಂಬಾ ದಿನವಾಗಿತ್ತು. ಬಹದ್ದೂರ್ ಬಳಿಕ ಇದು ಧ್ರುವ ಅವರ ಉತ್ತಮ ಚಿತ್ರವಾಗಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಚೆನ್ನಾಗಿದೆ ಹಾಗೂ ವಿಷ್ಯುಯಲ್ಸ್ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ.
ಹೀಗೆ ಬಹುತೇಕ ಎಲ್ಲ ಪ್ರತಿಕ್ರಿಯೆಗಳಲ್ಲೂ ಮೆಚ್ಚುಗೆಯನ್ನು ಗಳಿಸಿರುವ ಕೆಡಿ ಮುಂದಿನ ಪ್ರದರ್ಶನಗಳಲ್ಲಿ ಯಾವ ರೀತಿಯ ವಿಮರ್ಶೆಗಳನ್ನು ಪ್ರೇಕ್ಷಕರಿಂದ ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.

