ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದ್ದು, ನೈಸರ್ಗಿಕ ವಿಕೋಪಗಳಿಂದ ತತ್ತರಿಸಿದ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಿಯಮಗಳು ಜುಲೈ 1, 2026 ರಿಂದ ಜಾರಿಗೆ ಬರಲಿವೆ.
ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಆರ್ಥಿಕವಾಗಿ ಕಂಗಾಲಾದವರಿಗೆ ನೆರವಾಗಲು ಆರ್‌ಬಿಐ ಮಾನವೀಯ ನೆಲೆಯ ಹೊಸ ನಿಯಮಗಳನ್ನು ರೂಪಿಸಿದೆ. ಪ್ರವಾಹ ಅಥವಾ ಭೂಕಂಪದಂತಹ ಪರಿಸ್ಥಿತಿಯಲ್ಲಿ ಇನ್ನು ಮುಂದೆ ಸಾಲಗಾರರು ಬ್ಯಾಂಕಿಗೆ ಅಲೆದಾಡಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಬದಲಿಗೆ ಬ್ಯಾಂಕುಗಳೇ ಅಂತಹ ಸಂತ್ರಸ್ತರನ್ನು ಗುರುತಿಸಿ ಸಾಲದ ಅವಧಿ ವಿಸ್ತರಣೆ ಮತ್ತು ಶುಲ್ಕ ಮನ್ನಾದಂತಹ ಸೌಲಭ್ಯಗಳನ್ನು ನೀಡಲಿವೆ. ಇದು ದೇಶದ ಕೋಟ್ಯಂತರ ಸಾಲಗಾರರಿಗೆ, ವಿಶೇಷವಾಗಿ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ದೊಡ್ಡ ವರದಾನವಾಗಲಿದೆ.
ಹೊಸ ನಿಯಮದ ಪ್ರಮುಖ ಅಂಶಗಳು:
1. ಅರ್ಜಿ ಸಲ್ಲಿಸುವ ಅಗತ್ಯವಿಲ್ಲ: ಇದುವರೆಗೆ ನೈಸರ್ಗಿಕ ವಿಕೋಪದ ಸಮಯದಲ್ಲಿ ಸಾಲದ ಮೇಲೆ ರಿಯಾಯಿತಿ ಅಥವಾ ಪುನರ್ರಚನೆ (Loan Restructuring) ಪಡೆಯಲು ಗ್ರಾಹಕರು ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಬ್ಯಾಂಕುಗಳೇ ಮುಂದೆ ಬಂದು ಅರ್ಹ ಖಾತೆದಾರರಿಗೆ ಸಹಾಯ ಮಾಡಬಹುದು. ಅಂದರೆ ಪ್ರವಾಹ, ಭೂಕಂಪ ಅಥವಾ ಇತರ ವಿಕೋಪಗಳು ಸಂಭವಿಸಿದ ಪ್ರದೇಶಗಳಲ್ಲಿ ಬ್ಯಾಂಕುಗಳು ನೇರವಾಗಿ ಸ್ಪಂದಿಸಿ ಸಾಲದ ಅವಧಿ ವಿಸ್ತರಣೆಯಂತಹ ಕ್ರಮಗಳನ್ನು ಕೈಗೊಳ್ಳಲಿವೆ.
2. ನಿರಾಕರಿಸುವ ಅವಕಾಶವೂ ಇದೆ: ಒಂದು ವೇಳೆ ಯಾವುದೇ ಗ್ರಾಹಕರಿಗೆ ಬ್ಯಾಂಕ್ ನೀಡುವ ಈ ಸಾಲ ಪುನರ್ರಚನೆ ಸೌಲಭ್ಯ ಬೇಡವೆಂದಿದ್ದರೆ, ವಿಕೋಪ ಘೋಷಣೆಯಾದ 135 ದಿನಗಳೊಳಗೆ ಅದನ್ನು ತಿರಸ್ಕರಿಸುವ ಅವಕಾಶವಿರುತ್ತದೆ. ಈ ನಿಯಮವು ವಾಣಿಜ್ಯ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ (NBFC) ಗಳಿಗೂ ಅನ್ವಯಿಸುತ್ತದೆ.
3. ನಿರಂತರ ಬ್ಯಾಂಕಿಂಗ್ ಸೇವೆ: ವಿಕೋಪದ ಸಮಯದಲ್ಲಿ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗದಂತೆ ಆರ್‌ಬಿಐ ವಿಶೇಷ ಗಮನ ಹರಿಸಿದೆ. ಸಂಕಷ್ಟದ ಸಮಯದಲ್ಲಿ ಬ್ಯಾಂಕುಗಳು ತಾತ್ಕಾಲಿಕ ಸ್ಥಳಗಳಿಂದ ಕೆಲಸ ಮಾಡಲು, ಮೊಬೈಲ್ ಬ್ಯಾಂಕಿಂಗ್ ಯೂನಿಟ್‌ಗಳು, ಸ್ಯಾಟಲೈಟ್ ಕಚೇರಿಗಳು ಮತ್ತು ಎಕ್ಸ್‌ಟೆನ್ಶನ್ ಕೌಂಟರ್‌ಗಳ ಮೂಲಕ ಸೇವೆ ನೀಡಲು ಅನುಮತಿ ನೀಡಲಾಗಿದೆ. ಎಟಿಎಂ ಸೇವೆಗಳನ್ನು ಶೀಘ್ರವಾಗಿ ಪುನರಾರಂಭಿಸಿ ನಗದು ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
4. ಶುಲ್ಕ ಮನ್ನಾ ಮತ್ತು ರಿಯಾಯಿತಿ: ಬ್ಯಾಂಕುಗಳು ತಮ್ಮ ವಿವೇಚನೆಯ ಮೇರೆಗೆ ಒಂದು ವರ್ಷದವರೆಗೆ ಕೆಲವು ಸೇವಾ ಶುಲ್ಕಗಳನ್ನು ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ಮನ್ನಾ ಮಾಡಬಹುದು. ಆದರೆ ಈ ಸೌಲಭ್ಯವು ಈ ಹಿಂದೆ ಸರಿಯಾಗಿ ಸಾಲ ಮರುಪಾವತಿ ಮಾಡಿದವರಿಗೆ ಮತ್ತು 30 ದಿನಗಳಿಗಿಂತ ಹೆಚ್ಚು ಬಾಕಿ ಉಳಿಸಿಕೊಳ್ಳದ ಖಾತೆದಾರರಿಗೆ ಮಾತ್ರ ಅನ್ವಯಿಸುತ್ತದೆ.
5. ಎನ್‌ಪಿಎ (NPA) ಖಾತೆಗಳಿಗೆ ಸಮಾಧಾನ: ವಿಕೋಪದ ಕಾರಣದಿಂದ ಸಾಲದ ಕಂತು ಕಟ್ಟಲಾಗದೆ ಎನ್‌ಪಿಎ (NPA) ಆಗಿ ಬದಲಾದ ಖಾತೆಗಳನ್ನು ಮತ್ತೆ ‘ಸ್ಟ್ಯಾಂಡರ್ಡ್ ಅಸೆಟ್’ ಎಂದು ವರ್ಗೀಕರಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಬ್ಯಾಂಕುಗಳು ಹೆಚ್ಚುವರಿಯಾಗಿ ಶೇ. 5 ರಷ್ಟು ಪ್ರೊವಿಜನ್ ಇರಿಸಬೇಕಾಗುತ್ತದೆ.

