ಬೀದರ್ : ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಗುರುನಾನಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ನಿಂದಾಗಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಒಳಗೆ ಒಮ್ಮಿಂದೊಮ್ಮೆಲೇ ದಟ್ಟ ಹೊಗೆ ಆವರಿಸಿದ್ದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರು ಪ್ರಾಣಭಯದಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಆಸ್ಪತ್ರೆಯ ಒಂದು ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಪಸರಿಸಿದ್ದು, ಆಸ್ಪತ್ರೆಯ ಕಿಟಕಿಗಳಿಂದ ಕಪ್ಪು ಹೊಗೆ ಹೊರಬರಲಾರಂಭಿಸಿತು. ಈ ವೇಳೆ ಆಸ್ಪತ್ರೆಯಲ್ಲಿದ್ದ ನೂರಾರು ರೋಗಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲ ರೋಗಿಗಳನ್ನು ಸ್ಟ್ರೆಚರ್ ಮತ್ತು ವೀಲ್ ಚೇರ್ ಮೂಲಕ ಆಸ್ಪತ್ರೆಯ ಸಿಬ್ಬಂದಿ ತುರ್ತಾಗಿ ಹೊರತಂದಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. (ICU) ಮತ್ತು ತುರ್ತು ಚಿಕಿತ್ಸಾ ಘಟಕದಲ್ಲಿದ್ದ ರೋಗಿಗಳನ್ನು ತಕ್ಷಣವೇ ಹತ್ತಿರದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿದ್ದ ಬೆಲೆಬಾಳುವ ವೈದ್ಯಕೀಯ ಉಪಕರಣಗಳು ಬೆಂಕಿಗೆ ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ.

