ಧಾರವಾಡ: ಗಾಂಜಾ ಕೇಸ್ ಆರೋಪ ಹಾಗೂ ಪೊಲೀಸರ ಕಿರುಕುಳಕ್ಕೆ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಆದಿತ್ಯ ಎಂಬ ಬಿಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದವನು. ಗಾಂಜಾ ಸೇವನೆ ಮಾಡದಿದ್ದರೂ ತನ್ನ ವಿರುದ್ಧ ಆರೋಪ ಮಾಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಲ್ಲದೇ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ದಿಡುಕಿನ ನಿರ್ಧಾರ ಕೈಗೊಂಡಿದ್ದಾನೆ.
ಆದಿತ್ಯ ಧಾರವಾಡದ ಕಿಟಲ್ ಕಾಲೇಜ್ ನಲ್ಲಿ ಬಿಎಸ್ ಸಿ ವ್ಯಾಸಂಗ ಮಾಡುತ್ತಿದ್ದ. ಗಾಂಜಾ ಸೇವನೆ ಆರೋಪದಲ್ಲಿ ಪೊಲೀಸರು 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಆದಿತ್ಯನ ವರದಿಯಲ್ಲಿ ನೆಗೆಟ್ ಬಂದಿತ್ತು. ವಿಚಾರಣೆ ಬಳಿಕ ಆದಿತ್ಯನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು.
ಆದಿತ್ಯ ಮನೆಗೆ ಬಂದ ಬಳಿಕವೂ ಪೊಲೀಸರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಆದಿತ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡಿರುವ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.

