ವಿಶ್ವದಾದ್ಯಂತ ಯಾವಾಗಲೂ ಹೊಸ ತಂತ್ರಜ್ಞಾನ ಮತ್ತು ಆರ್ಥಿಕ ವಿಚಾರಗಳಿಂದ ಆಶ್ಚರ್ಯಚಕಿತಗೊಳಿಸುವ ಚೀನಾ, ಈಗ ಒಂದು ವಿಚಿತ್ರವಾದ ಟ್ರೆಂಡ್ನಿಂದ ಸುದ್ದಿಯಲ್ಲಿದೆ. ಇಷ್ಟು ದಿನ ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿದ್ದ ಕೋಳಿಗಳು, ಈಗ ಅಲ್ಲಿನ ಪ್ರಮುಖ ನಗರಗಳಲ್ಲಿ ಮುದ್ದಿನ ಸಾಕುಪ್ರಾಣಿಗಳಾಗಿ (Pets) ಬದಲಾಗಿವೆ.ಇವುಗಳು ಡೈಪರ್ ಧರಿಸಿ, ರಸ್ತೆಗಳಲ್ಲಿ ಮಾಲೀಕರೊಂದಿಗೆ ವಿಹರಿಸುತ್ತಾ ಇಂಟರ್ನೆಟ್ ಸೆನ್ಸೇಷನ್ ಆಗುತ್ತಿವೆ.
ಹೌದು. ಪ್ರಪಂಚದಾದ್ಯಂತ ವಿಚಿತ್ರ ಆಹಾರ ಪದ್ಧತಿ ಹಾಗೂ ವಿನೂತನ ತಂತ್ರಜ್ಞಾನಕ್ಕೆ ಹೆಸರಾಗಿರುವ ಚೀನಾದಲ್ಲಿ ಈಗ ಹೊಸದೊಂದು ಟ್ರೆಂಡ್ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಕೇವಲ ಚಿಕನ್ ಬಿರಿಯಾನಿ ಅಥವಾ ಅಡುಗೆಗೆ ಮಾತ್ರ ಸೀಮಿತವಾಗಿದ್ದ ಕೋಳಿಗಳು, ಈಗ ಮನೆಮಂದಿಯ ಮುದ್ದಿನ ‘ಪೆಟ್ಸ್’ ಆಗಿ ಬದಲಾಗಿವೆ. ಅಚ್ಚರಿಯೆಂದರೆ, ಈ ಕೋಳಿಗಳು ನಾಯಿ-ಬೆಕ್ಕುಗಳಂತೆ ಡೈಪರ್ ಧರಿಸಿ ಮಾಲೀಕರೊಂದಿಗೆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿವೆ!
ಅಗ್ವಾಯ್ ಮತ್ತು ‘ಫೀನಿಕ್ಸ್ ಫೇರೀಸ್’
ಗುವಾಂಗ್ಡಾಂಗ್ನಂತಹ ಪ್ರದೇಶಗಳಲ್ಲಿ ಕೋಳಿ ಕಂಡರೆ ಅದು ಅಡುಗೆ ಪಾತ್ರೆಯಲ್ಲಿ ಇರಲೇಬೇಕು ಎಂಬ ಮಾತಿದೆ. ಆದರೆ, ಅಗ್ವಾಯ್ ಎಂಬ ಮಹಿಳೆ ತನಗೆ ಸಂಬಂಧಿಕರು ನೀಡಿದ್ದ ಮೂರು ಮೊಟ್ಟೆಗಳನ್ನು ಕಾವು ಕೊಟ್ಟು ಮರಿ ಮಾಡಿಸಿ, ಆ ಕೋಳಿಮರಿಗಳನ್ನು ಅಡುಗೆ ಮಾಡದೆ ಪ್ರೀತಿಯಿಂದ ಸಾಕುತ್ತಿದ್ದಾಳೆ. ಇವು ಅಪರೂಪದ ಮತ್ತು ದುಬಾರಿ ‘ತೈಹೆ ಬ್ಲ್ಯಾಕ್-ಬೋನ್ಡ್ ಸಿಲ್ಕಿ ಫೌಲ್’ ತಳಿಗೆ ಸೇರಿದವುಗಳಾಗಿವೆ. ಮಂಜಿನಂತೆ ಬಿಳಿ ಬಣ್ಣದ ಗರಿಗಳನ್ನು ಹೊಂದಿರುವ ಇವುಗಳನ್ನು ಪ್ರೀತಿಯಿಂದ ‘ಫೀನಿಕ್ಸ್ ಫೇರೀಸ್’ ಎಂದು ಕರೆಯಲಾಗುತ್ತದೆ. ಇವುಗಳ ನಿರ್ವಹಣೆ ತುಂಬಾ ಸುಲಭವಾಗಿದ್ದು, ತಿಂಗಳಿಗೆ ಆಹಾರಕ್ಕಾಗಿ ಕೇವಲ 30 ಯುವಾನ್ (ಸುಮಾರು ರೂ. 450) ಮಾತ್ರ ಖರ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಾಯಿ, ಬೆಕ್ಕುಗಳಿಗಿಂತ ಇವೇ ವಾಸಿ!
ಕೋಳಿಗಳು ತುಂಬಾ ಬುದ್ಧಿವಂತ ಪ್ರಾಣಿಗಳು ಮತ್ತು ಅವುಗಳಿಗೆ ಭಾವನೆಗಳಿರುತ್ತವೆ ಎಂದು ಮಾಲೀಕರು ಹೇಳುತ್ತಿದ್ದಾರೆ.ಜಿಯಾಂಗ್ಸು ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಕೋಳಿ ಹುಂಜ ಮನುಷ್ಯರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತದೆ ಮತ್ತು ಕಣ್ಣುಗಳ ಮೂಲಕವೇ ಸಂವಹನ ನಡೆಸುತ್ತದೆ ಎಂದು ಹೇಳಿದ್ದಾರೆಗಿಳಿ, ನಾಯಿ ಮತ್ತು ಬೆಕ್ಕುಗಳನ್ನು ಸಾಕಿದ್ದ ಅಲಿನ್ ಎಂಬ ಇನ್ನೊಬ್ಬ ಮಾಲೀಕರು, ಇವೆಲ್ಲವುಗಳಿಗಿಂತ ಕೋಳಿಗಳೇ ಮನುಷ್ಯರೊಂದಿಗೆ ಬೇಗನೆ ಬೆರೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಸಾಕುಪ್ರಾಣಿಗಳಿಗೆ ತಗಲುವ ವೆಚ್ಚ ಮತ್ತು ಅವುಗಳಿಗೆ ನೀಡಬೇಕಾದ ಸಮಯಕ್ಕಿಂತ, ಕೋಳಿಗಳ ನಿರ್ವಹಣೆ ತುಂಬಾ ಸುಲಭ ಎಂಬುದು ಇವರ ವಾದ.

