ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಬಿಜೆಪಿ ನಾಯಕಿ, ಮಾಜಿ ಜಿಲ್ಲಾ ಸಚಿವೆ ದೀಪಾಲಿ ತಿವಾರಿ ತಮ್ಮದೇ ಪಕ್ಷದ ನಾಯಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಲೈವ್ ಬಂದು ಮಾತನಾಡಿದ ದೀಪಾಲಿ ತಿವಾರಿ ಮಹೋಬಾ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ್ಲಾಲ್ ಕುಷ್ವಾಹಾ ವಿರುದ್ಧ ಹರಿಹಾಯ್ದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ಹೌದು, ಮಹೋಬಾ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸ್ಥಾನ ಬೇಕೆಂದರೆ ನನ್ನ ಜತೆ ಮಲಗಬೇಕು ಎಂದು ಮೋಹನ್ಲಾಲ್ ಕುಷ್ವಾಹಾ ಷರತ್ತು ವಿಧಿಸಿದ್ದ ಎಂದು ದೀಪಾಲಿ ತಿವಾರಿ ಆರೋಪಿಸಿದ್ದಾರೆ. ಕಚೇರಿಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸ್ಥಾನ ನೀಡುವ ಕುರಿತು ಮೋಹನ್ಲಾಲ್ ಬಳಿಕ ಕೇಳಿದಾಗ ದೆಹಲಿ ಹಾಗೂ ಲಕ್ನೋ ನಗರಗಳಲ್ಲಿ ತನಗೆ ಕಂಪನಿ ಕೊಡಬೇಕು, ಒಂದುವೇಳೆ ಇದಕ್ಕೆ ಒಪ್ಪದಿದ್ದರೆ ಇರುವ ಹುದ್ದೆಯಿಂದ ತೆಗೆದುಹಾಕುವುದಾಗಿ ಹಾಗೂ ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದೂ ಸಹ ದೀಪಾಲಿ ಆರೋಪಿಸಿದ್ದಾರೆ.
ಅಲ್ಲದೇ ಈತನ ಜತೆ ಜಿಲ್ಲಾ ಖಜಾಂಚಿ ಹಾಗೂ ಉಪಾಧ್ಯಕ್ಷರಿಬ್ಬರು ಆತನ ಷರತ್ತಿಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು ಎಂದೂ ಸಹ ದೀಪಾಲಿ ಇದೇ ವಿಡಿಯೊದಲ್ಲಿ ಆರೋಪಿಸಿದ್ದಾರೆ. ಹಲವು ವರ್ಷಗಳ ಕಾಲ ಪಕ್ಷಕ್ಕೆ ಭಕ್ತೆಯಾಗಿ ದುಡಿದಿದ್ದೇನೆ ಎಂದು ಅಳಲು ತೋಡಿಕೊಂಡ ದೀಪಾಲಿ ತಿವಾರಿ ತನ್ನ ನಂಬಿಕೆ ಪತಿಯ ವಿರುದ್ಧ ಅತ್ಯಾಚಾರದ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ ಕೂಡಲೇ ಹೋಯಿತು ಎಂದು ಹೇಳಿಕೊಂಡು ಭಾವುಕರಾಗಿದ್ದಾರೆ.
ಇನ್ನು ಈ ಆರೋಪ ಮಾಡಿರುವ ದೀಪಾಲಿ ತಿವಾರಿ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದು, ಅತ್ತ ಆರೋಪಕ್ಕೊಳಗಾದ ಮೋಹನ್ಲಾಲ್ ಕುಷ್ವಾಹಾ ಇದನ್ನೆಲ್ಲೆ ಸುಳ್ಳು ಆರೋಪ ಎಂದು ತಳ್ಳಿಹಾಕಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ವಿಡಿಯೊ ಭಾರೀ ವೈರಲ್ ಆಗಿದ್ದು, ಚರ್ಚೆಗೀಡಾಗಿದೆ.

