ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ನಮಗೆ ಅತಿಯಾದ ಮಸಾಲೆ ಅಥವಾ ಎಣ್ಣೆ ಪದಾರ್ಥಗಳನ್ನು ತಿನ್ನಲು ಮನಸ್ಸಾಗುವುದಿಲ್ಲ. ಇಂತಹ ಸಮಯದಲ್ಲಿ ಹೊಟ್ಟೆಗೆ ತಂಪು ನೀಡುವ ಮತ್ತು ಜೀರ್ಣಕ್ರಿಯೆಗೆ ಸುಲಭವಾಗುವ ಹಗುರವಾದ ಆಹಾರದ ಹುಡುಕಾಟದಲ್ಲಿ ನಾವಿರುತ್ತೇವೆ. ಸಾಮಾನ್ಯವಾಗಿ ಈ ಸಮಯದಲ್ಲಿ ಮಜ್ಜಿಗೆ ಅನ್ನ ಅಥವಾ ಕಿಚಡಿ ಮೊರೆ ಹೋಗುವುದು ಹೆಚ್ಚು. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ‘ಕುಕುಂಬರ್ ರೈಸ್’ ಅಥವಾ ಸೌತೆಕಾಯಿ ಅನ್ನ ಬೇಸಿಗೆಯ ಮಧ್ಯಾಹ್ನದ ಊಟಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಕೇವಲ 15 ನಿಮಿಷಗಳಲ್ಲಿ ತಯಾರಾಗುವ ಈ ಖಾದ್ಯ ರುಚಿಯ ಜೊತೆಗೆ ಆರೋಗ್ಯಕ್ಕೂ ಪೂರಕವಾಗಿದೆ.
ಸೌತೆಕಾಯಿ ಅನ್ನ ಯಾಕೆ ವಿಶೇಷ? ಸೌತೆಕಾಯಿಯಲ್ಲಿ ನೀರಿನಂಶ ಹೆಚ್ಚಿರುವುದರಿಂದ ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಈ ರೆಸಿಪಿಯಲ್ಲಿ ಸೌತೆಕಾಯಿಯ ತುರಿಯನ್ನು ಅನ್ನದ ಜೊತೆ ಬೆರೆಸಿ, ಸಾಸಿವೆ, ಕಡಲೆಬೇಳೆ, ಶೇಂಗಾ ಮತ್ತು ಗೋಡಂಬಿಯ ಒಗ್ಗರಣೆ ನೀಡಲಾಗುತ್ತದೆ. ಇದು ತಿನ್ನಲು ಕ್ರಂಚಿ ಆಗಿರುವುದಲ್ಲದೆ, ಹೆಚ್ಚಿನ ಸಮಯ ಕಿಚನ್‌ನಲ್ಲಿ ಕಳೆಯುವ ಕೆಲಸವನ್ನು ತಪ್ಪಿಸುತ್ತದೆ. ನೀವು ಬೆಳಗಿನ ಅವಸರದಲ್ಲಿ ಆಫೀಸ್ ಟಿಫಿನ್ ಬಾಕ್ಸ್‌ಗೆ ಏನಾದರೂ ಪೌಷ್ಟಿಕ ಆಹಾರ ಪ್ಯಾಕ್ ಮಾಡಬೇಕೆಂದಿದ್ದರೆ ಇದಕ್ಕಿಂತ ಬೆಸ್ಟ್ ಆಪ್ಷನ್ ಮತ್ತೊಂದಿಲ್ಲ.
ಬೇಕಾಗುವ ಪದಾರ್ಥಗಳು:
- ಉದುರು ಉದುರಾಗಿ ಬೇಯಿಸಿದ ಅನ್ನ – 1 ಕಪ್
- ತುರಿದ ಸೌತೆಕಾಯಿ – 2
- ಶೇಂಗಾ ಮತ್ತು ಗೋಡಂಬಿ – ತಲಾ 2 ಚಮಚ
- ಸಾಸಿವೆ, ಕಡಲೆಬೇಳೆ – ತಲಾ 1 ಚಮಚ
- ಹಸಿಮೆಣಸಿನಕಾಯಿ, ಶುಂಠಿ ಮತ್ತು ಈರುಳ್ಳಿ – ಸ್ವಲ್ಪ
- ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ: ಮೊದಲಿಗೆ ಸೌತೆಕಾಯಿಯನ್ನು ತುರಿದು ಅದರಲ್ಲಿರುವ ಹೆಚ್ಚಿನ ನೀರಿನಂಶವನ್ನು ಹಿಂಡಿ ತೆಗೆಯಬೇಕು. ನಂತರ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕಡಲೆಬೇಳೆ, ಶುಂಠಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಕರಿಬೇವು, ಶೇಂಗಾ ಹಾಗೂ ಗೋಡಂಬಿ ಸೇರಿಸಿ ಅವು ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ನಂತರ ಸೌತೆಕಾಯಿ ತುರಿಯನ್ನು ಸೇರಿಸಿ ಎರಡು ನಿಮಿಷ ಬೇಯಿಸಿ. ಅಂತಿಮವಾಗಿ ಬೇಯಿಸಿದ ಅನ್ನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿದರೆ ರುಚಿಯಾದ ಸೌತೆಕಾಯಿ ಅನ್ನ ಸಿದ್ಧ. ಇದನ್ನು ಮೊಸರು ಅಥವಾ ರೈತಾದೊಂದಿಗೆ ಸವಿಯಬಹುದು. ಹಿಂದಿನ ದಿನದ ಅನ್ನ ಉಳಿದಿದ್ದರೂ ಸಹ ಈ ಹೊಸ ಖಾದ್ಯವನ್ನು ಸುಲಭವಾಗಿ ಮಾಡಬಹುದಾಗಿದೆ.

