ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಹೊರವಲಯದ ಬೆಕಾಸಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ರೈಲುಗಳ ನಡುವಿನ ಡಿಕ್ಕಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ ಸುಮಾರು 84 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಸ್ಥಳೀಯ ಕಮ್ಯುಟರ್ ರೈಲು ಹಳಿಯ ಮೇಲೆ ಬಂದಿದ್ದ ಟ್ಯಾಕ್ಸಿಗೆ ಮೊದಲು ಡಿಕ್ಕಿ ಹೊಡೆದಿದೆ. ಬೆನ್ನಲ್ಲೇ ಹಿಂದಿನಿಂದ ಬಂದ ದೂರದೂರಿನ ರೈಲು (Long-distance train) ಕಮ್ಯುಟರ್ ರೈಲಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಹಿಳೆಯರಿಗಾಗಿ ಮೀಸಲಾಗಿದ್ದ ಬೋಗಿಯು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗರಿಷ್ಠ ಪ್ರಮಾಣದ ಹಾನಿ ಸಂಭವಿಸಿದೆ.
ರೈಲ್ವೆ ಸಂಸ್ಥೆ PT KAI ನ ಮುಖ್ಯಸ್ಥ ಬಾಬಿ ರಶೀದಿ ಅವರು ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿದ್ದು, ಗ್ಯಾಸ್ ಕಟರ್ಗಳ ಮೂಲಕ ಬೋಗಿಗಳನ್ನು ಕತ್ತರಿಸಿ ಅವರನ್ನು ಹೊರತೆಗೆಯಲಾಗುತ್ತಿದೆ.ಇಂಡೋನೇಷ್ಯಾದ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಸ್ಯಾಫಿ ಮಾತನಾಡಿ, “ಕೆಲವು ಸಂತ್ರಸ್ತರು ಇನ್ನೂ ಬದುಕಿದ್ದಾರೆ, ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ತಾಂತ್ರಿಕ ಕೌಶಲ್ಯದ ಅಗತ್ಯವಿದೆ,” ಎಂದಿದ್ದಾರೆ.
ಸರ್ಕಾರದ ಪ್ರತಿಕ್ರಿಯೆ : ಅಪಘಾತದ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಅಧ್ಯಕ್ಷ ಪ್ರಬೋವೋ ಸುಬಿಯಾಂಟೊ, ಸಂಚಾರ ದಟ್ಟಣೆ ತಪ್ಪಿಸಲು ಹಳಿಗಳ ಸಮೀಪ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ದೇಶದ ರೈಲ್ವೆ ವ್ಯವಸ್ಥೆಯ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ. ಅಪಘಾತಕ್ಕೆ ಕಾರಣವಾದ ಟ್ಯಾಕ್ಸಿ ‘ಗ್ರೀನ್ ಎಸ್ಎಂ ಇಂಡೋನೇಷ್ಯಾ’ ಸಂಸ್ಥೆಗೆ ಸೇರಿದ್ದಾಗಿದ್ದು, ತನಿಖೆಗೆ ಸಹಕರಿಸುವುದಾಗಿ ಸಂಸ್ಥೆ ತಿಳಿಸಿದೆ . ಈ ದುರಂತದ ಹಿನ್ನೆಲೆಯಲ್ಲಿ ಜಕಾರ್ತಾದ ಹಲವು ರೈಲು ಸಂಚಾರಗಳನ್ನು ರದ್ದುಗೊಳಿಸಲಾಗಿದೆ ಅಥವಾ ಕಡಿತಗೊಳಿಸಲಾಗಿದೆ.

