ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ (ಉಚಿತ ಬಸ್ ಪ್ರಯಾಣ) ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಕೇವಲ ಸಾರಿಗೆ ಸೌಲಭ್ಯವಾಗಿ ಉಳಿಯದೆ, ರಾಜ್ಯದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ನಾಂದಿ ಹಾಡಿದೆ.ಈ ಕುರಿತು ಸರ್ಕಾರ ಪ್ರಕಟಣೆ ಹೊರಡಿಸುವ ಮೂಲಕ ಸಂತಸ ಹಂಚಿಕೊಂಡಿದೆ.
ರಾಜ್ಯದ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಶಕ್ತಿ ತುಂಬಿರುವ ‘ಶಕ್ತಿ’ ಯೋಜನೆ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ಕೇವಲ ಸಾರಿಗೆ ಸೌಲಭ್ಯವಾಗಿ ಮಾತ್ರವಲ್ಲದೆ, ಸ್ತ್ರೀ ಸಬಲೀಕರಣದ ಮಹೋನ್ನತ ಕ್ರಾಂತಿಯಾಗಿ ಹೊರಹೊಮ್ಮಿರುವ ಈ ಯೋಜನೆಯಡಿ ಈವರೆಗೆ ಕೋಟ್ಯಂತರ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, ಸಮಾಜದ ಮುಖ್ಯವಾಹಿನಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ.
ಯೋಜನೆಯ ಪ್ರಮುಖ ಮೈಲಿಗಲ್ಲುಗಳು
- ಪ್ರಯಾಣದ ಸಂಖ್ಯೆ: ಯೋಜನೆ ಜಾರಿಯಾದಾಗಿನಿಂದ ಈವರೆಗೆ ರಾಜ್ಯದ ಮಹಿಳೆಯರು ಒಟ್ಟು 684 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ.
- ಆರ್ಥಿಕ ವೆಚ್ಚ: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ (KSRTC, BMTC, NWKRTC, KKRTC) ಈ ಯೋಜನೆಗಾಗಿ ಒಟ್ಟು 17,743 ಕೋಟಿ ರೂ. ವೆಚ್ಚವಾಗಿದೆ.
- ಹೊಸ ಅನುದಾನ: ಯೋಜನೆಯ ಯಶಸ್ವಿ ಅನುಷ್ಠಾನವನ್ನು ಮುಂದುವರಿಸಲು ಸರ್ಕಾರವು 2026-27ನೇ ಸಾಲಿಗೆ 5,300 ಕೋಟಿ ರೂ. ಗಳ ಭಾರೀ ಅನುದಾನವನ್ನು ಮೀಸಲಿಟ್ಟಿದೆ.
ಸಬಲೀಕರಣದ ಹಾದಿ
ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಅವರ ಓಡಾಟ ಗಣನೀಯವಾಗಿ ಹೆಚ್ಚಾಗಿದೆ. ಇದು ಉದ್ಯೋಗಸ್ಥ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಆರ್ಥಿಕ ಹೊರೆ ತಗ್ಗಿಸಿದ್ದು, ಸ್ತ್ರೀ ಸಬಲೀಕರಣದ ದಿಕ್ಕಿನಲ್ಲಿ ಇದೊಂದು “ಮಹೋನ್ನತ ಕ್ರಾಂತಿ” ಎಂದು ವಿಶ್ಲೇಷಿಸಲಾಗುತ್ತಿದೆ. ಬಸ್ ನಿಲ್ದಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಸ್ಥಳೀಯ ವ್ಯಾಪಾರ-ವಹಿವಾಟುಗಳಿಗೂ ಇದು ಪರೋಕ್ಷವಾಗಿ ನೆರವಾಗಿದೆ.

