ಐಪಿಎಲ್ 2026ರ 39ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದೆ. ಈ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಬೆಂಗಳೂರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸತತ ಸೋಲುಗಳಿಂದ ಕಂಗಾಲಾಗಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ.
ಮುಖಾಮುಖಿ ಇತಿಹಾಸದಲ್ಲಿ ಯಾರ ಮೇಲುಗೈ? ಐಪಿಎಲ್ ಇತಿಹಾಸದಲ್ಲಿ ಈವರೆಗೆ ಉಭಯ ತಂಡಗಳು 34 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 20 ಬಾರಿ ಜಯ ಸಾಧಿಸಿದ್ದರೆ, ಡೆಲ್ಲಿ 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 11 ಪಂದ್ಯಗಳಲ್ಲಿ ಆರ್‌ಸಿಬಿ 7 ಬಾರಿ ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ. ಆದರೆ, ಕಳೆದ 2025 ಮತ್ತು 2026ರ ಮುಖಾಮುಖಿಗಳಲ್ಲಿ ಡೆಲ್ಲಿ ತಂಡವು ಆರ್‌ಸಿಬಿ ವಿರುದ್ಧ ಸತತ ಗೆಲುವು ಸಾಧಿಸಿರುವುದು ವಿಶೇಷ.
ದಾಖಲೆಗಳ ಹೊಸ್ತಿಲಲ್ಲಿ ಸ್ಟಾರ್ ಆಟಗಾರರು ಬೆಂಗಳೂರು ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ತವರು ಮೈದಾನದಲ್ಲಿ ಇಂದು ಕಣಕ್ಕಿಳಿಯುತ್ತಿದ್ದು, ಐಪಿಎಲ್‌ನಲ್ಲಿ 9,000 ರನ್ ಪೂರೈಸಲು ಅವರಿಗೆ ಕೇವಲ 111 ರನ್‌ಗಳ ಅವಶ್ಯಕತೆಯಿದೆ. ಇನ್ನು ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ 2,000 ರನ್ ಮತ್ತು 150 ವಿಕೆಟ್‌ಗಳ ಅಪರೂಪದ ಮೈಲಿಗಲ್ಲಿನ ಸಮೀಪದಲ್ಲಿದ್ದಾರೆ. ಕೆಎಲ್ ರಾಹುಲ್ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಜೇಯ 152 ರನ್ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಪಿಚ್ ವರದಿ ಮತ್ತು ಬದಲಾವಣೆಗಳು ದೆಹಲಿಯ ಪಿಚ್ ಪ್ರಸ್ತುತ ಬ್ಯಾಟರ್‌ಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಕಳೆದ ಪಂದ್ಯದಲ್ಲಿ ಇಲ್ಲಿ ಬರೋಬ್ಬರಿ 529 ರನ್‌ಗಳು ಹರಿದು ಬಂದಿದ್ದವು. ಬೌಂಡರಿಗಳು ಚಿಕ್ಕದಾಗಿರುವುದರಿಂದ ಇಂದು ಕೂಡ ರನ್ ಮಳೆ ನಿರೀಕ್ಷಿಸಲಾಗಿದೆ. ಡೆಲ್ಲಿ ತಂಡದಲ್ಲಿ ವೇಗಿ ಲುಂಗಿ ಎನ್ಗಿಡಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಅವರ ಬದಲಿಗೆ ದುಷ್ಮಂತ ಚಮೀರ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್‌ಸಿಬಿ ಪರ ಫಿಲ್ ಸಾಲ್ಟ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು, ವಿರಾಟ್ ಕೊಹ್ಲಿ ಜೊತೆ ಜೇಕಬ್ ಬೆಥೆಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇಂದಿನ ಪಂದ್ಯವು ರಾತ್ರಿ 7:30ಕ್ಕೆ ಆರಂಭವಾಗಲಿದ್ದು, ಡೆಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಬೆಂಗಳೂರು ಅಗ್ರಸ್ಥಾನದತ್ತ ಕಣ್ಣಿಟ್ಟಿದೆ.

