ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಪ್ರತಿ ನಿತ್ಯವೂ ಬೆಳಗಿನ ಪ್ರಾರ್ಥನ ಸಮಯದ ನಂತರ ವಿದ್ಯಾರ್ಥಿಗಳಿಂದ ಹತ್ತು ನಿಮಿಷಗಳ ಕಾಲ ಕನ್ನಡ ದಿನ ಪತ್ರಿಕೆಯನ್ನು ಓದಿಸುವ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ ನಟ್ ಶಿಕ್ಷಣ, ಮನರಂಜನೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯಾವಕಾಶ ನೀಡುತ್ತಿದ್ದಾರೆ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ, ಶ್ರವಣದೋಷ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದೇ ಇರುವಂತಹ ಲಕ್ಷಣಗಳು ಕಂಡು ಬರುತ್ತಿವೆ.
ಆದ್ದರಿಂದ ಮಕ್ಕಳು ಶಾಲೆಗಳಲ್ಲಿ ದಿನ ನಿತ್ಯವೂ ಕನಿಷ್ಠ 10 ರಿಂದ 15 ನಿಮಿಷ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಸಿದ್ಧತೆ, ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು ಮತ್ತು ಶಬ್ದಕೋಶ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಸುಧಾರಿಸಲು ಇದು ಸಹಕಾರಿಯಾಗುತ್ತದೆಂದು ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರುರವರು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಗಳು, ಶಾ.ಶಿ.ಇ. ಬೆಂಗಳೂರುರವರಲ್ಲಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಸಂಬಂಧವಾಗಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಪತ್ರದಲ್ಲಿನ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನವಿರುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ವಸತಿ ಶಾಲೆ, ನಿಲಯಗಳು/ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರತಿ ನಿತ್ಯವೂ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನ ಸಮಯದ ನಂತರ ಮಕ್ಕಳಿಂದ ಹತ್ತು ನಿಮಿಷಗಳ ಕಾಲ ಕಡ್ಡಾಯವಾಗಿ-ಕನ್ನಡ-ದಿನಪತ್ರಿಕೆ-ಓದುವ ಅಭ್ಯಾಸವನ್ನು ಅನುಷ್ಠಾನಗೊಳಿಸುವಂತೆ ಈ ಮೂಲಕ ತಿಳಿಸಿದೆ.
ಚಿತ್ರಕೃಪೆ: ಎಐ

