ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಸುಡುತ್ತಿರುವ ಬಿಸಿಲು ಮತ್ತು ಹೆಚ್ಚುತ್ತಿರುವ ಧೂಳಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರ ನೆರವಿಗೆ ಪೊಲೀಸ್ ಇಲಾಖೆ ಮುಂದಾಗಿದೆ. ಸಂಚಾರ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕಮಿಷನರ್‌ಗಳಿಗೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಏನಿದು ಆದೇಶ ? ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಶ್ರೀ ಮೋಹನ್ ಕುಮಾರ್ ದಾನಪ್ಪ ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ರಸ್ತೆ ನಿರ್ಮಾಣದಿಂದಾಗಿ ಧೂಳಿನ ಪ್ರಮಾಣ ಮಿತಿಮೀರಿದೆ. ಇದರಿಂದಾಗಿ ರಸ್ತೆಯಲ್ಲಿ ಗಂಟೆಗಟ್ಟಲೆ ನಿಂತು ಕೆಲಸ ಮಾಡುವ ಪೊಲೀಸರು ಉಸಿರಾಟದ ತೊಂದರೆ, ಅಸ್ತಮಾ ಮತ್ತು ಅಲರ್ಜಿಯಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಇಲಾಖೆ ಸೂಚಿಸಿರುವ ಪ್ರಮುಖ ಸೌಲಭ್ಯಗಳು:
- ನೆರಳಿನ ವ್ಯವಸ್ಥೆ: ಸಂಚಾರ ಸಿಗ್ನಲ್‌ಗಳ ಬಳಿ ಪೊಲೀಸರು ಬಿಸಿಲಿನಿಂದ ರಕ್ಷಣೆ ಪಡೆಯಲು ದೊಡ್ಡ ಗಾತ್ರದ ಪ್ಯಾರಾಚೂಟ್ ಕೊಡೆಗಳನ್ನು ಅಳವಡಿಸುವುದು.
- ಮಾಸ್ಕ್ ವಿತರಣೆ: ವಾಯುಮಾಲಿನ್ಯ ಮತ್ತು ಧೂಳಿನಿಂದ ರಕ್ಷಿಸಿಕೊಳ್ಳಲು ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ಕಡ್ಡಾಯವಾಗಿ ನೀಡುವುದು.
- ಪಾನೀಯ ವ್ಯವಸ್ಥೆ: ತೀವ್ರ ಬಿಸಿಲಿನಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ (Dehydration) ತಡೆಯಲು ಶುದ್ಧ ಕುಡಿಯುವ ನೀರು ಹಾಗೂ ಎಲೆಕ್ಟ್ರೋಲೈಟ್ ಪಾನೀಯಗಳನ್ನು ವಿತರಿಸುವುದು.
ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿ ಸೇರಿದಂತೆ ರಾಜ್ಯಾದ್ಯಂತ ಈ ಸೌಲಭ್ಯಗಳನ್ನು ತಕ್ಷಣವೇ ಜಾರಿಗೆ ತರುವಂತೆ ಪೊಲೀಸ್ ಉಪ ಮಹಾ ನಿರೀಕ್ಷಕರು (ಸಂಚಾರ ಮತ್ತು ರಸ್ತೆ ಸುರಕ್ಷತೆ) ಆದೇಶಿಸಿದ್ದಾರೆ. ಈ ಕ್ರಮವು ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.


