ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಚುರುಕುಗೊಂಡಿದೆ. ಬಿಸಿಲ ಝಳದ ನಡುವೆಯೂ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ತಮಿಳುನಾಡಿನಲ್ಲಿ ಎಲ್ಲಾ 234 ಕ್ಷೇತ್ರಗಳಿಗೂ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮುಂಜಾನೆಯಿಂದಲೇ ಮತದಾರರು, ರಾಜಕೀಯ ನಾಯಕರು, ಸಿನಿ ತಾರೆಯರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಡಿಸಿಎಂ ಉದಯನಿಧಿ ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್, ಪುತ್ರಿ ಶೃತಿ ಹಾಸನ್, ನಟಿ ಖುಷ್ಬೂ, ಅಜಯ್, ನಟ, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಸೇರಿದಂತೆ ಘಟನಾನುಘಟಿ ನಾಯಕರು ಮತಕೇಂದ್ರಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾಅರೆ.
ಇದೇ ವೇಳೆ ನಟಿ ತ್ರಿಷಾ ಕೃಷ್ಣನ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ತ್ರಿಷಾ, ಎಲ್ಲರೂ ಮತದಾನ ಮಾಡಿ. ಅದು ನಿಮ್ಮ ಹಕ್ಕು ಹಾಗೂ ಕರ್ತವ್ಯ. ಹಾಗಾಗಿ ಮತಗಟ್ಟೆಗೆ ಹೋಗಿ ನಿಮ್ಮ ಹಕ್ಕು ಚಲಾಯಿಸಿ ಎಂದು ಕರೆ ನೀಡಿದ್ದಾರೆ.

