HomeKarnatakaಪೌರಕಾರ್ಮಿಕರಿಗೆ ಗುಡ್ ನ್ಯೂಸ್: ನಗದು ರಹಿತ ಆರೋಗ್ಯ ವಿಮಾ ಯೋಜನೆ ಜಾರಿ

ಪೌರಕಾರ್ಮಿಕರಿಗೆ ಗುಡ್ ನ್ಯೂಸ್: ನಗದು ರಹಿತ ಆರೋಗ್ಯ ವಿಮಾ ಯೋಜನೆ ಜಾರಿ

ಶಿವಮೊಗ್ಗ: ಪೌರ ಕಾರ್ಮಿಕರು ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭ ಬರುವ ಕಾರಣ ಒಂದು ಅದ್ಭುತ ನಗದುರಹಿತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು ಎಲ್ಲ ಪೌರ ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನೇರ ಪಾವತಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಅರಿವು ಮೂಡಿಸುವುದು ಹಾಗೂ ಆರೋಗ್ಯ ವಿಮಾ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಈ ಆರೋಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ರೂ. 5 ಲಕ್ಷದವರೆಗೆ ಸುಮಾರು ಮೂರು ಸಾವಿರ ಖಾಯಿಲೆಗಳಿಗೆ ಯಾವುದೇ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದ್ದು, ರಾಜ್ಯದಲ್ಲಿಯೇ ಮೊದಲಿಗೆ ಶಿವಮೊಗ್ಗದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿವೃತ್ತಿ ಹೊಂದುವುದರೊಳಗೆ ಕಾರ್ಮಿಕರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು. ಕಣ್ಣಿನ ಪೊರೆ ಸಮಸ್ಯೆ ಇದ್ದಲ್ಲಿ ಇಂದೇ ಶಸ್ತ್ರಚಿಕಿತ್ಸೆ ಪಡೆಯಿರಿ. ನಿವೃತ್ತಿ ನಂತರ ಈ ಸೌಲಭ್ಯ ಪಡೆಯಲು ಬರುವುದಿಲ್ಲವೆಂದು ತಿಳಿಸಿದರು.

ಪೌರಕಾರ್ಮಿಕರಿಗೆ ಆರೋಗ್ಯ ವಿಮೆಯನ್ನು ನೀಡಬೇಕೆಂದು ಮೊದಲು ಪ್ರೇರೇಪಣೆ ನೀಡಿದ್ದು, ರಾಹುಲ್ ಗಾಂಧಿಯವರು ಎಂದು ಸ್ಮರಿಸಿದ ಅವರು 1990 ರ ದಶಕದಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ದತಿ ಬಂದಿತು. ಗುತ್ತಿಗೆ ಮಹಾಮಾರಿ ವಿರುದ್ದ ನಾನು ಪ್ರಶ್ನೆ ಮಾಡಿದ್ದೆ, ಅದಕ್ಕೆ ಸ್ಪಂದಿಸಿದ ಪರಮೇಶ್ವರ್ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ನೇರ ಪಾವತಿ ಕಾರ್ಮಿಕರನ್ನಾಗಿ ಘೋಷಿಸುವ ವಿಷಯವನ್ನು ಸೇರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017 ರಲ್ಲಿ ನೇರ ಪಾವತಿ ಪೌರಕಾರ್ಮಿಕರೆಂದು ಘೋಷಿಸಿದರು. ಹಾಗೂ ಕಳೆದ ವರ್ಷ ಮೇ ಮಾಹೆಯಲ್ಲಿ 20 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಯಿತು. ಪೌರ ಕಾರ್ಮಿಕರಿಗೆ ವಸತಿ ಯೋಜನೆ, ಆರೋಗ್ಯ ವಿಮೆ ಜಾರಿಯಾಗಿದ್ದು ಮುಂದಿನ ದಿನಗಳಲ್ಲಿ ಕಸ ಗುಡಿಸುವ ಮೆಕ್ಯಾನೈಸ್ಡ್ ವ್ಯವಸ್ಥೆ ತರಲಾಗುವುದು. ಇದರಿಂದ ಧೂಳು, ಗಲೀಜಿನಿಂದ ರಕ್ಷಣೆ ಒದಗಲಿದೆ. ರಿಸ್ಕ್ ಭತ್ಯೆ ನೀಡಲು ಸಹ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ. ಹಾಗೂ ಬೆಂಗಳೂರಿನಲ್ಲಿ ಐಪಿಡಿ ಸಾಲಪ್ಪ ಸ್ಮಾರಕ ಭವನ ನಿರ್ಮಿಸಲಾಗುವುದು. ಪೌರ ಕಾರ್ಮಿಕರು ಬೆಂಗಳೂರಿಗೆ ಬಂದಾಗ ಇಲ್ಲಿ ತಂಗುವ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹಿಂದೆ ಸಾಲಪ್ಪನವರು ಹೋರಾಡಿದ್ದರು. ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದ್ದ ಕಾರ್ಮಿಕರಿಗೆ ಸಾಲಪ್ಪನವರ ಸಮಿತಿ ಮೂಲಕ ಡಿ.ದೇವರಾಜ ಅರಸುರವರು ಪೌರ ಕಾರ್ಮಿಕರೆಂದು ನಾಮಕರಣ ಮಾಡಿದರು ಎಂದು ಸ್ಮರಿಸಿದರು.

ಕೋಡಿಜಿಟ್ ವಿಮಾ ಕಂಪೆನಿಯ ಸಂಯೋಜಕರಾದ ಕೃಷ್ಣಮೂರ್ತಿ ಮಾತನಾಡಿ, ಪೌರ ಕಾರ್ಮಿಕರಿಗೆ, ಸಫಾಯಿ ಕರ್ಮಚಾರಿಗಳಿಗೆ ಒಂದು ಅದ್ಭುತವಾದ ಆರೋಗ್ಯ ವಿಮಾ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದ್ದು, ಭಾರತದಲ್ಲೇ ಈ ರೀತಿಯ ನಗದುರಹಿತ ಆರೋಗ್ಯ ವಿಮೆ ಇದೇ ಮೊದಲು ಎಂದು ಹೇಳಬಹುದು.  ಈ ಆರೋಗ್ಯ ಕಾರ್ಡ್ ಪಡೆದವರು ಯಾವುದೇ ಕಾಯಿಲೆ ಬಂದರೂ ರೂ. 5 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ಪಡೆಯಬಹುದು. ಶಿವಮೊಗ್ಗದ ಪ್ರತಿಯೊಂದು ಆಸ್ಪತ್ರೆಯಲ್ಲಿ ಈ ಸೌಲಭ್ಯ ಪಡೆಯಬಹುದಾಗಿದ್ದು 3000 ವಿವಿಧ ಖಾಯಿಲೆಗಳಿಗೆ ಈ ಯೋಜನೆಯಡಿ ನಗದುರಹಿತ ಚಿಕಿತ್ಸೆ ಲಭ್ಯವಿದೆ. ಈ ಆರೋಗ್ಯ ಕಾರ್ಡ್ ಇದ್ದರೆ, ನಿಮ್ಮ ಜೇಬಿನಲ್ಲಿ ರೂ. 5 ಲಕ್ಷ ಇದ್ದಂತೆ. ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ, ಸಮಸ್ಯೆ ಚಿಕ್ಕದಿದ್ದಾಗಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಫ್ಟ್ವೇರ್ ಕಂಪೆನಿಗಳಲ್ಲಿ ಜಾರಿಗೊಳಿಸಿದಂತಹ ವೈಯಕ್ತಿಕ ಆರೋಗ್ಯ ವಿಮಾ ಯೋಜನೆಯನ್ನು ಪೌರಕಾರ್ಮಿಕರಿಗೆ ರೂಪಿಸಬೇಕೆಂದು ಅಧ್ಯಕ್ಷರು ಆಸಕ್ತಿ ತೋರಿ, ಸಾಕಷ್ಟು ಶ್ರಮಿಸಿ, ಅತಿ ಉಪಯುಕ್ತವಾದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಮೆಯಡಿ ಆರೋಗ್ಯ ಮತ್ತು ಅಪಘಾತ ವಿಮೆ ಎರಡೂ ಕವರ್ ಆಗುತ್ತದೆ. ಕಾರ್ಡ್ ನ್ನು ಸ್ಕ್ಯಾನ್ ಮಾಡಿದರೆ ಸಾಕು, ಎಲ್ಲ ವಿವರ ಇದರಲ್ಲಿ ಲಭ್ಯವಾಗುತ್ತದೆ. ಅತೀ ಸರಳವಾಗಿ ಇದನ್ನು ಬಳಸಬಹುದಾಗಿದ್ದು, ಭಾರತದಲ್ಲೇ ಪ್ರಥಮ ಬಾರಿಗೆ ಇಂತಹ ಅನನ್ಯವಾದ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಯೋಜನೆ ಕುರಿತು ಮಾಹಿತಿ ನೀಡಿದರು.

 ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ತಳಮಟ್ಟದ ಕಾರ್ಮಿಕರಿಗೆ ಇಂತಹ ಉತ್ತಮ ಆರೋಗ್ಯ ವಿಮೆ ಯೋಜನೆ ತಲುಪಿಸಿದ ಅಧ್ಯಕ್ಷರು ಹಾಗೂ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದ ಅವರು ಲೋಡರ್ಸ್, ಕ್ಲೀನರ್ಸ್, ಸ್ವೀಪರ್ಸ್ಗಳಿಗೆ ಸಹ ಈ ಯೋಜನೆಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಸಂದೇಶ ಮತ್ತು ಅಭಿನಂದನೆಯನ್ನು ಅವರ ವಿಶೇಷ ಅಧಿಕಾರಿ ಶ್ರೀಪತಿ ಕಾರ್ಯಕ್ರಮದಲ್ಲಿ ತಿಳಿಸಿದರು.

 ಇದೇ ವೇಳೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು

 ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಸ್ವಾಗತಿಸಿದರು. ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಡಿ.ಎಂ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಭಾಕರ, ಗೋಪಾಲ್, ಅಧಿಕಾರಿಗಳು, ಪೌರ ಕಾರ್ಮಿಕರು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular