ಬೆಂಗಳೂರು: ತನ್ನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ನಂಬಿಸಿ ಪ್ರಿಯತಮನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ತುಮಕೂರು ಮೂಲದ ಕಿರಣ್(27) ಕೊಲೆಯಾದವನು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಾ(27) ಎಂಬ ಯುವತಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.
ಒಂದೇ ಕಡೆ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಪ್ರೇಮಾ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಪ್ರೀತಿಸುತ್ತಿದ್ದರು. ಯಾವುದೋ ವಿಚಾರಕ್ಕೆ ಕಿರಣ್ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ. ತಾಯಿ ಮತ್ತು ಸಹೋದರನ ಜತೆಗೆ ವಾಸವಾಗಿದ್ದ ಪ್ರೇಮಾ ಅವರು ಹೊರಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲವೆಂದು ಕಿರಣ್ ಕರೆಸಿಕೊಂಡಿದ್ದಾಳೆ.
ಮಂಗಳವಾರ ಮಧ್ಯಾಹ್ನ ಕಿರಣ್ ಮನೆಗೆ ಬಂದಿದ್ದಾನೆ. ಆಗ ಆತನನ್ನು ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ. ಕಿರುಚಾಡಿದ ಕಿರಣ್ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಆರಂಭದಲ್ಲಿ ಕಿರಣ್ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪೊಲೀಸರ ಮುಂದೆ ಪ್ರೇಮಾ ಹೇಳಿಕೆ ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.
ಆರೋಪಿ ಪ್ರೇಮಾ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ ಇದು ಆತ್ಮಹತ್ಯೆ ಎಂಬಂತೆ ಕಂಡು ಬಂದಿತ್ತು. ತನಿಖೆಯಲ್ಲಿ ಯುವತಿಯೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಕೃತ್ಯದಲ್ಲಿ ಒಬ್ಬಳೇ ಬಾಗಿಯಾಗಿದ್ದಾಳೆಯೇ ಅಥವಾ ಬೇರೆ ಯಾರಾದರೂ ಇದ್ದರೆ ಎನ್ನುವ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ವಾಯುವ್ಯ ವಿಭಾಗ ಡಿಸಿಪಿ ಡಿ.ಎಲ್. ನಾಗೇಶ್ ತಿಳಿಸಿದ್ದಾರೆ.

