ಹೈದರಾಬಾದ್ : ಲಿಫ್ಟ್ ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ ಸರ್ಕಾರಿ ಶಿಕ್ಷಕ ಹಾಗೂ ಆತನ ಸ್ನೇಹಿತನ ವಿರುದ್ಧ ಗಂಗಾಧರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೃತ್ಯದ ವಿಡಿಯೋ ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡಿದ್ದಲ್ಲದೆ, ಸಂತ್ರಸ್ತೆಯ ಮೇಲೆ ಸತತ ದೌರ್ಜನ್ಯ ನಡೆಸಿ ಬಲವಂತದ ಗರ್ಭಪಾತ ಮಾಡಿಸಿರುವ ಘೋರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಮಾಜವನ್ನು ತಿದ್ದಬೇಕಾದ ಶಿಕ್ಷಕನೇ ಕಾಮುಕನಾಗಿ ಬದಲಾದ ಘಟನೆ ಗಂಗಾಧರ ಮಂಡಲದಲ್ಲಿ ನಡೆದಿದೆ. ಅಮಾಯಕ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಕಾರು ಹತ್ತಿಸಿಕೊಂಡು, ಆಕೆಯ ಅಸಹಾಯಕತೆಯನ್ನು ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ ಸರ್ಕಾರಿ ಶಿಕ್ಷಕ ಮಲ್ಲೇಶಂ ಹಾಗೂ ಆತನ ಸಹಚರ ಮಧು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಏನಿದು ಘಟನೆ
ಗಂಗಾಧರ ಮಂಡಲದಲ್ಲಿ ಸರ್ಕಾರಿ ಶಿಕ್ಷಕನೊಬ್ಬ ಮಹಿಳೆಯೊಬ್ಬರಿಗೆ ಲಿಫ್ಟ್ ಕೊಡುವುದಾಗಿ ನಂಬಿಸಿ, ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸಂತ್ರಸ್ತ ಮಹಿಳೆ ಬಸ್ಗಾಗಿ ಕಾಯುತ್ತಿದ್ದಾಗ, ಸರ್ಕಾರಿ ಶಿಕ್ಷಕ ಮಲ್ಲೇಶಂ ಎಂಬಾತ ತನ್ನ ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹೇಳಿದ್ದಾನೆ. ಅಲ್ಲಿಗೆ ಬಂದ ಸಂತ್ರಸ್ತೆಯ ಪರಿಚಯಸ್ಥ ಮಲ್ಯಾಲ ಮಧು ಎಂಬಾತ, ಶಿಕ್ಷಕನು ನಂಬಿಕಸ್ತನೆಂದು ಹೇಳಿ ಆಕೆಯನ್ನು ಕಾರು ಹತ್ತಿಸಿದ್ದಾನೆ.
ಅತ್ಯಾಚಾರ ಮತ್ತು ವಿಡಿಯೋ ಚಿತ್ರೀಕರಣ: ಕಾರನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಮಲ್ಲೇಶಂ, ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಈ ಕೃತ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಾನೆ.ಈ ಸಂದರ್ಭದಲ್ಲಿ ಆಕೆಯನ್ನು ಜಾತಿಯ ಹೆಸರಿನಲ್ಲಿ ನಿಂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತೊಬ್ಬನಿಂದ ದೌರ್ಜನ್ಯ : ವಿಡಿಯೋ ತೋರಿಸಿ ಬೆದರಿಸಿದ ಮಲ್ಯಾಲ ಮಧು ಕೂಡ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಇದರಿಂದಾಗಿ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಆರೋಪಿಗಳು ಬಲವಂತವಾಗಿ ಆಕೆಗೆ ಗರ್ಭಪಾತ ಮಾಡಿಸಿದ್ದಾರೆ.
ಪೊಲೀಸ್ ಕ್ರಮ: ಆರೋಪಿಗಳ ಬೆದರಿಕೆಗೆ ಹೆದರಿ ಸುಮ್ಮನಿದ್ದ ಮಹಿಳೆ, ಅಂತಿಮವಾಗಿ ಧೈರ್ಯ ತಂದುಕೊಂಡು ಈ ತಿಂಗಳ 16ರಂದು ಗಂಗಾಧರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಶಿಕ್ಷಕ ಮಲ್ಲೇಶಂ ಮತ್ತು ಮಲ್ಯಾಲ ಮಧು ವಿರುದ್ಧ ಅತ್ಯಾಚಾರ, ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆ ಹಾಗೂ ಕೊಲೆ ಬೆದರಿಕೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

