ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಶೀಘ್ರದಲ್ಲೇ ಎರಡನೇ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಭಾನುವಾರ ಈ ಸಿಹಿ ಸುದ್ದಿಯನ್ನು ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಇವರ ಮೊದಲ ಮಗಳು ‘ದುವಾ’ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಸಂಭ್ರಮವನ್ನು ಜಗತ್ತಿಗೆ ಸಾರಿದ್ದಾರೆ.
ಬಾಲಿವುಡ್ ಗಣ್ಯರಿಂದ ಹರಿದುಬಂದ ಶುಭಾಶಯ
ದೀಪಿಕಾ ಮತ್ತು ರಣವೀರ್ ಪೋಸ್ಟ್ ಮಾಡುತ್ತಿದ್ದಂತೆಯೇ ಚಿತ್ರರಂಗದ ಗೆಳೆಯರು ಮತ್ತು ಅಭಿಮಾನಿಗಳು ಅಭಿನಂದನೆಗಳ ಸುರಿಮಳೆಗೈದಿದ್ದಾರೆ. ಆಲಿಯಾ ಭಟ್ ಈ ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ಸಂಭ್ರಮಿಸಿದರೆ, ಪ್ರಿಯಾಂಕಾ ಚೋಪ್ರಾ, ಸಮಂತಾ ರೂತ್ ಪ್ರಭು, ಕಿಯಾರಾ ಅಡ್ವಾಣಿ ಮತ್ತು ಶೋಭಿತಾ ಧೂಳಿಪಾಲ ಅವರು ದಂಪತಿಗೆ ಶುಭ ಹಾರೈಸಿದ್ದಾರೆ. ಅನನ್ಯಾ ಪಾಂಡೆ “ಓ ಮೈ ಗಾಡ್, ಬಿಗ್ಗೆಸ್ಟ್ ಲವ್” ಎಂದು ಬರೆದರೆ, ಅರ್ಜುನ್ ಕಪೂರ್ “ದುವಾಗೆ ಈಗ ಪಾರ್ಟ್‌ನರ್ ಇನ್ ಕ್ರೈಮ್ ಸಿಗುತ್ತಿದ್ದಾನೆ” ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಪೋಷಕತ್ವದ ಬಗ್ಗೆ ದೀಪಿಕಾ ಮಾತು
ಇತ್ತೀಚೆಗೆ ನಡೆದ ‘ವೇವ್ಸ್ 2025’ ಶೃಂಗಸಭೆಯಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ, ತಾಯ್ತನವು ತನ್ನ ಜೀವನದ ಆದ್ಯತೆಗಳನ್ನು ಹೇಗೆ ಬದಲಿಸಿದೆ ಎಂದು ವಿವರಿಸಿದ್ದರು. “ಮಗುವಿನ ಆಗಮನದ ನಂತರ ನಾನು ಮತ್ತೊಬ್ಬ ಜೀವಿಗೆ ಜವಾಬ್ದಾರಿಯಾಗಿದ್ದೇನೆ. ಇದುವರೆಗೆ ನನ್ನ ಜೀವನ, ಮಹತ್ವಾಕಾಂಕ್ಷೆ ಮತ್ತು ವೃತ್ತಿಜೀವನದ ಬಗ್ಗೆ ಮಾತ್ರ ಯೋಚಿಸುತ್ತಿದ್ದ ನನಗೆ, ಈಗ ಸಂಪೂರ್ಣವಾಗಿ ನನ್ನನ್ನು ಅವಲಂಬಿಸಿರುವ ಮಗುವಿನ ಆರೈಕೆ ಮಾಡುವುದು ಜೀವನದ ಹೊಸ ಅರ್ಥ ನೀಡಿದೆ” ಎಂದು ಅವರು ಭಾವುಕರಾಗಿ ಹೇಳಿದ್ದರು.
ದೀಪಿಕಾ-ರಣವೀರ್ ವೃತ್ತಿಜೀವನ
ವೃತ್ತಿಜೀವನದ ವಿಷಯಕ್ಕೆ ಬಂದರೆ, ರಣವೀರ್ ಸಿಂಗ್ ಅಭಿನಯದ ‘ದುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯುತ್ತಿದೆ. ಇನ್ನು ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಜೊತೆ ಸಿದ್ಧಾರ್ಥ್ ಆನಂದ್ ಅವರ ‘ಕಿಂಗ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ, ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೂ ದೀಪಿಕಾ ತೆರೆ ಹಂಚಿಕೊಳ್ಳಲಿದ್ದಾರೆ.
೨೦೧೮ರಲ್ಲಿ ಇಟಲಿಯ ಲೇಕ್ ಕೋಮೋದಲ್ಲಿ ವಿವಾಹವಾಗಿದ್ದ ಈ ಜೋಡಿ, ೨೦೨೪ರ ಸೆಪ್ಟೆಂಬರ್ ೮ ರಂದು ಮೊದಲ ಮಗಳು ದುವಾನನ್ನು ಬರಮಾಡಿಕೊಂಡಿದ್ದರು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

