ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ಅಖಿಲ ಭಾರತ ಪ್ರವಾಸಿ ಪರವಾನಗಿ ನಿಯಮಗಳ ತಿದ್ದುಪಡಿ ಮಾಡಿದ್ದು, ಹೊರ ರಾಜ್ಯಗಳ ಪ್ರಯಾಣದ ಗರಿಷ್ಠ ಅವಧಿಯನ್ನು 60 ದಿನಗಳಿಗೆ ಸೀಮಿತ ಮಾಡಿದೆ.
ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನಗಳು ಮೊದಲು ಹೊರ ರಾಜ್ಯಗಳಲ್ಲಿ 90 ದಿನ ಇರಬಹುದಾಗಿತ್ತು. ಅದರಲ್ಲಿ 30 ದಿನ ಕಡಿತಗೊಳಿಸಲಾಗಿದ್ದು, 60 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪ್ರಯಾಣವು ಮೂಲ ರಾಜ್ಯದಲ್ಲಿಯೇ ಆರಂಭವಾಗಿ ಮೂಲ ರಾಜ್ಯದಲ್ಲಿಯೇ ಕೊನೆಯಾಗಬೇಕು. ಜಿಪಿಎಸ್ ಟ್ರ್ಯಾಕರ್ ಮೂಲಕ ಮೇಲ್ವಿಚಾರಣೆ ಮಾಡಲಾಗುವುದು ಎಂದು ನಿಯಮ ಹೇಳಿದೆ.
ಅಖಿಲ ಭಾರತ ಪ್ರವಾಸಿ ಪರವಾನಗಿ ಹೊಂದಿರುವ ವಾಹನದಲ್ಲಿ ಟ್ರ್ಯಾಕಿಂಗ್ ಸಾಧನ ಕಡ್ಡಾಯವಾಗಿ ಇರಬೇಕು. ಸಂಚಾರವನ್ನು ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ಮೇಲ್ವಿಚಾರಣೆ ಮಾಡಲಾಗುವುದು. ಪಾವತಿಸದ ಟೋಲ್ ಅನ್ನು ಬಳಕೆದಾರರ ಶುಲ್ಕವೆಂದು ಸೇರ್ಪಡೆ ಮಾಡಲಾಗುವುದು. ಟೋಲ್ ಬಾಕಿ ಇದ್ದಲ್ಲಿ ಪರವಾನಿಗೆ ನೀಡುವ ಮೊದಲು ಪಾವತಿಸಲು ಕ್ರಮ ಕೈಗೊಳ್ಳಬೇಕು. ತಪಾಸಣೆಯ ವೇಳೆ ಪ್ರವಾಸಿ ವಾಹನ ನಿರ್ವಾಹಕರು ಅಗತ್ಯ ಮಾಹಿತಿಯನ್ನು ಹೊಂದಿರಬೇಕು. ಪ್ರಯಾಣದ ಆರಂಭ, ತಲುಪುವ ಸ್ಥಳ, ಮಾರ್ಗ, ಹಾದು ಹೋಗುವ ರಾಜ್ಯಗಳ ವಿವರ ಹೊಂದಿರಬೇಕು. ಅಖಿಲ ಭಾರತ ಪ್ರವಾಸಿ ಪರವಾನಗಿ ವಾಹನಗಳನ್ನು ಸ್ಟೇಜ್ ಕ್ಯಾರಿಯೇಜ್ ಆಗಿ ಬಳಸಲು ಅವಕಾಶ ಇರುವುದಿಲ್ಲ. ಪಟ್ಟಿಯಲ್ಲಿ ಇಲ್ಲದ ಪ್ರವಾಸಿಗರನ್ನು ಹತ್ತಿಸಲು ಅಥವಾ ಇಳಿಸಲು ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.
ವಾಹನ ನೋಂದಾಯಿಸಿದ ರಾಜ್ಯದ ಸಾರಿಗೆ ಪ್ರಾಧಿಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು. ತ್ರೈಮಾಸಿಕ, ವಾರ್ಷಿಕ ಮಾನ್ಯತೆ ಇರಬೇಕು. ಯಾವುದೇ ಬಾಕಿ ಚಲನ್ ಗಳು ಇರಬಾರದು. ವಾಹನದ ಎಲ್ಲಾ ದಾಖಲೆಗಳು ಮಾನ್ಯವಾಗಿರಬೇಕು ಎನ್ನಲಾಗಿದೆ.

