ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ( ಏಪ್ರಿಲ್ 18 ) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಿಲ್ ಸಾಲ್ಟ್ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 176 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್, ಟ್ರಿಸ್ಟನ್ ಸ್ಟಬ್ಸ್ ಅರ್ಧಶತಕ ಹಾಗೂ ಮಿಲ್ಲರ್ ಸ್ಪೋಟಕ ಆಟದ ನೆರವಿನಿಂದ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಫಿಲ್ ಸಾಲ್ಟ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಸಾಲ್ಟ್ ಹಾಗೂ ಟಿಮ್ ಡೇವಿಡ್ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಸಹ 20 ರನ್ ದಾಟಲಿಲ್ಲ. ಸಾಲ್ಟ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 19, ದೇವದತ್ ಪಡಿಕ್ಕಲ್ 18, ನಾಯಕ ರಜತ್ ಪಟಿದಾರ್ 8, ಟಿಮ್ ಡೇವಿಡ್ 26, ಜಿತೇಶ್ ಶರ್ಮಾ 14, ರೊಮಾರಿಯೊ ಶೆಫರ್ಡ್ ಕೇವಲ 1, ಕೃನಾಲ್ ಪಾಂಡ್ಯ 12, ಭುವನೇಶ್ವರ್ ಕುಮಾರ್ ಅಜೇಯ 3 ಹಾಗೂ ಯಾವುದೇ ರನ್ ಗಳಿಸದ ರಸಿಕ್ ಧರ್ ಅಜೇಯರಾಗಿ ಉಳಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಲುಂಗಿ ಎನ್‌ಗಿಡಿ, ನಾಯಕ ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಮುಕೇಶ್ ಕುಮಾರ್ ಒಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಆರ್‌ಸಿಬಿ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 18 ರನ್‌ಗೆ 3 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ ಪಥುಮ್ ನಿಸ್ಸಂಕ 1, ಕರುಣ್ ನಾಯರ್ 5 ಹಾಗೂ ಸಮೀರ್ ರಿಜ್ವಿ 2 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಹೀಗೆ ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಕೆಎಲ್ ರಾಹು್ಲ ಜಾಣ್ಮೆಯ ಇನ್ನಿಂಗ್ಸ್ ಆಡಿದರು. ನಾಲ್ಕನೇ ವಿಕೆಟ್‌ಗೆ ಒಂದಾದ ಟ್ರಿಸ್ಟನ್ ಸ್ಟಬ್ಸ್ ಹಾಗೂ ಕೆಎಲ್ ರಾಹುಲ್ 69 ರನ್‌ಗಳ ಜತೆಯಾಟವನ್ನಾಡಿದರು. ರಾಹುಲ್ 34 ಎಸೆತಗಳಲ್ಲಿ 57 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಅಲ್ಲಿಗೆ 87 ರನ್‌ಗೆ 4 ವಿಕೆಟ್ ಕಳೆದುಕೊಂಡ ಡೆಲ್ಲಿಗೆ ಟ್ರಿಸ್ಟಬ್ ಸ್ಟಬ್ಸ್ ಹಾಗೂ ನಾಯಕ ಅಕ್ಷರ್ ಪಟೇಲ್ 47 ರನ್‌ಗಳ ಜತೆಯಾಟ ಮತ್ತಷ್ಟು ಸುಧಾರಣೆ ತಂದಿತು. ಅಕ್ಷರ್ 26 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್‌ಗೆ ತೆರಳಿದರು. ನಂತರ ಒಂದಾದ ಸ್ಟಬ್ಸ್ ಹಾಗೂ ಡೇವಿಡ್ ಮಿಲ್ಲರ್ ಜೋಡಿ 24 ಎಸೆತಗಳಲ್ಲಿ 45 ರನ್‌ಗಳ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆತ್ ಓವರ್‌ಗಳಲ್ಲಿ ಸಮಾಧಾನಕರ ಬೌಲಿಂಗ್ ಮಾಡಿ ಕೊನೆಯ ಓವರ್‌ಗೆ ಪಂದ್ಯ ತಂದ ಆರ್‌ಸಿಬಿ ಪರ ಕೊನೆಯ ರೊಮಾರಿಯೊ ಶೆಫರ್ಡ್ ಕೊನೆಯ ಓವರ್ ಬೌಲಿಂಗ್ ಮಾಡಿದರು. ಕೊನೆಯ ಓವರ್‌ನಲ್ಲಿ 15 ರನ್‌ಗಳ ಅಗತ್ಯವಿತ್ತು. ಮೊದಲೆರಡು ಎಸೆತಗಳಲ್ಲಿ ಸಿಂಗಲ್ ಬಂದ ಕಾರಣ ಕೊನೆಯ 4 ಎಸೆತಗಳಲ್ಲಿ 13 ರನ್ ಬೇಕಿತ್ತು ಹಾಗೂ ಡೆಲ್ಲಿ ಮೇಲೆ ಒತ್ತಡ ನಿರ್ಮಾಣವಾಗಿತ್ತು. ಆದರೆ ಮಿಲ್ಲರ್ ಸತತವಾಗಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿ ಗೆಲುವು ತಂದಿಟ್ಟರು. ಸ್ಟಬ್ಸ್ 47 ಎಸೆತಗಳಲ್ಲಿ ಅಜೇಯ 60 ರನ್ ಬಾರಿಸಿದರೆ, ಮಿಲ್ಲರ್ 10 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸಿದರು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಹಾಗೂ ಕೃನಾಲ್ ಪಾಂಡ್ಯ ಒಂದು ವಿಕೆಟ್ ಪಡೆದರು.

